ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ರೈತನ ಸಾವು

KannadaprabhaNewsNetwork |  
Published : May 19, 2026, 01:30 AM IST
18ಕೆಕೆಡಿಯು2. | Kannada Prabha

ಸಾರಾಂಶ

ಕಡೂರುವಿದ್ಯುತ್ ತಂತಿ ತಗುಲಿ ಹೊಡೆದ ಶಾಕ್‌ ನಿಂದ ತೀವ್ರ ಅಸ್ವಸ್ಥಗೊಂಡ ರೈತ ಸ್ಥಳದಲ್ಲಿಯೇ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮೆಸ್ಕಾಂ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಮೆಸ್ಕಾಂ ಮುಂದೆ ಶವವಿಟ್ಟು ಪ್ರತಿಭಟನೆ.

ಕನ್ನಡಪ್ರಭ ವಾರ್ತೆ, ಕಡೂರು

ವಿದ್ಯುತ್ ತಂತಿ ತಗುಲಿ ಹೊಡೆದ ಶಾಕ್‌ ನಿಂದ ತೀವ್ರ ಅಸ್ವಸ್ಥಗೊಂಡ ರೈತ ಸ್ಥಳದಲ್ಲಿಯೇ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮೆಸ್ಕಾಂ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಮರಡಿಹಳ್ಳಿ ಗ್ರಾಮದ ರೈತ ಹನುಮಂತಪ್ಪ (43) ಮೃತಪಟ್ಟವರು. ಸೋಮವಾರ ಹನುಮಂತಪ್ಪ ಎಂದಿನಂತೆ ತಮ್ಮ ತೋಟದಲ್ಲಿ ಕೃಷಿ ಕೆಲಸಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟರು.

ಮೆಸ್ಕಾಂ ನವರ ನಿರ್ಲಕ್ಷದಿಂದ ಹನುಮಂತಪ್ಪ ಮೃತಪಟ್ಟಿದ್ದಾರೆಂದು ಆಕ್ರೋಶಗೊಂಡ ಮರಡಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹನುಮಂತಪ್ಪನ ಮೃತದೇಹವನ್ನು ಕಡೂರು ಮೆಸ್ಕಾಂ ಕಚೇರಿ ಮುಂದೆ ಇಟ್ಟು ತಮಗೆ ನ್ಯಾಯ ಬೇಕೆಂದು ಆಗ್ರಹಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ನಡುವೆ ಆ ಭಾಗದ ಮೆಸ್ಕಾಂನ ಜೆ ಇ. ಬಸವರಾಜು ನಿರ್ಲಕ್ಷ ವಹಿಸಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿದ ಸ್ಥಳೀಯರು ಜೆಇ ಬಸವರಾಜು ಮತ್ತು ಮಾರ್ಗದಾಳನ್ನು ಬಂಧಿಸುವಂತೆ ಆಗ್ರಹಿಸಿದರು.

ಹನುಮಂತಪ್ಪನವರ ಪಕ್ಕದ ತೋಟದ ಮಾಲೀಕ ರಮೇಶ್ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು, ತಮ್ಮ ತೆಂಗು , ಅಡಕೆ ತೋಟಕ್ಕೆ ಕದ್ದು ಕರೆಂಟ್ ಲೈನ್ ಹಾಕಿರುವುದು ವಿಭಾಗೀಯ ಎಂಜಿನಿಯರ್‌ಗೆ ಗೊತ್ತಿದ್ದರೂ ರಮೇಶ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ದೂರಿದರು.

ಈ ವೇಳೆ ಗ್ರಾಮಸ್ಥರು ಘೋಷಣೆಗಳನ್ನು ಕೂಗುತ್ತಿದ್ದಂತೆ ಕಡೂರು ಮೆಸ್ಕಾಂ ಕಚೇರಿ ಬಳಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ಕೂಡಲೇ ಪೋಲೀಸ್ ವೃತ್ತ ನಿರೀಕ್ಷಕ ಎಂ.ರಫೀಕ್ ಬಿಗಿ ಬಂದೋಬಸ್ತ್ ಮಾಡಿಸಿ ಕ್ರಮ ವಹಿಸಿದರು. ಸ್ಥಳಕ್ಕೆ ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಎಇಇ ರವಿಕಿರಣ್ ಮತ್ತಿತರ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿದರು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಧಿಕಾರಿಗಳು ಶಕ್ತಿ ಮೀರಿ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರೂ ಕೂಡ ರೈತರು ಕಚೇರಿ ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದರು. ರೈತರು ಪಟ್ಟು ಬಿಡದ ಕಾರಣ ವೃತ್ತ ನಿರೀಕ್ಷಕ ರಫೀಕ್ ಮತ್ತು ಅಧಿಕಾರಿಗಳು ಪರಿಸ್ಥಿತಿ ಕೈ ಮೀರದಂತೆ ರೈತರ ಮನವೊಲಿಕೆಗೆ ಹರಸಾಹಸ ಪಟ್ಟರು.

ಈ ಸಂದರ್ಭದಲ್ಲಿ ಮೆಸ್ಕಾಂ ಇಇ ರವಿಕಿರಣ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ, ಮರಡಿಹಳ್ಳಿ ರಾಜು, ಮುಖಂಡರಾದ ಜಿಗಣೇಹಳ್ಳಿ ಲೋಕೇಶ್, ಬಸವರಾಜ್, ಪಟ್ಟಣಗೆರೆ ದಿನೇಶ್, ಚೇತನ್ ಕೆಂಪರಾಜ್ ಮತ್ತಿತರಿದ್ದರು.

-- ಕೋಟ್‌--

ಪ್ರಕರಣಕ್ಕೆ ಸಂಭಂಧಿಸಿದಂತೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ತನಿಖಾ ವರದಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು. ಆನಂತರ ಹಿರಿಯ ಅಧಿಕಾರಿಗಳ ವರದಿ ಆಧರಿಸಿ ಪರಿಹಾರ ಮಂಜೂರಾತಿ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.- ಮಂಜುನಾಥ್, ಅಧೀಕ್ಷಕ ಎಂಜಿನಿಯರ್ ಮೆಸ್ಕಾಂ, ಚಿಕ್ಕಮಗಳೂರು.

18ಕೆಕೆಡಿಯು2.

ಕಡೂರು ಪಟ್ಟಣದ ಮೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಮೃತ ವ್ಯಕ್ತಿಯ ಪರ ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯಿಸಿ ಮೆಸ್ಕಾಂ ವಿರುದ್ದ ಕಚೇರಿ ಮುಂದೆ ಶವವಿಟ್ಟು ಭಾರೀ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಡಿಡಿ ಹೆಸರಲ್ಲಿ ಬೇಲೂರು ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಸಂಭ್ರಮ