ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿಯವರು ಪ್ರತಿಯೊಬ್ಬ ಭಾರತೀಯರಿಗೂ, ವಿಶೇಷವಾಗಿ ಬೆಳಗಾವಿ ನಾಗರಿಕರಿಗೆ ಆದರ್ಶಪ್ರಾಯರಾಗಿದ್ದಾರೆ. ನಾವೆಲ್ಲರೂ ಅವರಂತೆ ದೇಶಭಕ್ತರಾದರೇ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರು ಹೇಳಿದರು.ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಿ, ಆ ಕಾಲದ ನೈಜ ಘಟನೆಗಳನ್ನು 106 ವರ್ಷದ ರಾಜೇಂದ್ರ ಕಲಘಟಗಿ ಅವರಿಂದ ಕೇಳುವುದು ಸಂತಸದ ವಿಷಯ. ಅವರ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ದೇಶಭಕ್ತರಾಗಿ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಂಜಂತ್ರಿ ಮಾತನಾಡಿ, ಮುಂಬೈಯಿಂದ ಬೆಳಗಾವಿಗೆ ಬರುತ್ತಿದ್ದ ಮಹಾತ್ಮ ಗಾಂಧಿಯವರ ಪತ್ರಗಳನ್ನು ಸ್ಥಳೀಯರಿಗೆ ಹಂಚುವಾಗ 1943ರ ಏಪ್ರಿಲ್‌ನಲ್ಲಿ ಕಾಂಗ್ರೆಸ್ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು. ಕ್ಯಾಂಪ್ ಠಾಣೆಯಿಂದ ಕೋಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಅವರಿಗೆ 7 ತಿಂಗಳು ಸಜೆ ವಿಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರವೂ ಹೋರಾಟ ಮುಂದುವರಿಸಿದ್ದರು. ಇಂದಿಗೂ ಯೋಗ-ಧ್ಯಾನ ಮಾಡುತ್ತ ಆಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ. ಗ್ರಂಥಾಲಯಗಳಿಗೆ ಉಚಿತ ಪುಸ್ತಕ ನೀಡುವುದರ ಜೊತೆಗೆ, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹5,000 ಆರ್ಥಿಕ ನೆರವು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಎಂದರು.ರಾಜೇಂದ್ರ ಕಲಘಟಗಿ ಮಾತನಾಡಿ, ಸ್ವಾತಂತ್ರ್ಯ ಬಂದ ದಿನದ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ತಪ್ಪು ದಾರಿಯಲ್ಲಿ ನಡೆಯದೇ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದರು.1920ರಲ್ಲಿ ಜನಿಸಿದ ನನಗೆ ಗಾಂಧೀಜಿಯನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ. ಬ್ರಿಟಿಷರು ನಮ್ಮ ಸಂಪತ್ತನ್ನು ವಿದೇಶಕ್ಕೆ ಕೊಂಡೊಯ್ಯುತ್ತಿದ್ದರು. ಅದನ್ನು ತಡೆಯಲು ನನ್ನಂತಹ ಅನೇಕರು ಪ್ರಾಣತ್ಯಾಗ ಮಾಡಿದ್ದೇವೆ. ಮನೆಯಲ್ಲಿ ಬಿಡದಿದ್ದರೂ ಚಳುವಳಿಗೆ ಹೋಗುತ್ತಿದ್ದೆ. ಜೈಲಿಗೆ ಹಾಕಿದರೂ ಎದೆಗುಂದದೆ ಮತ್ತೆ ಹೋರಾಟದಲ್ಲಿ ಭಾಗಿಯಾಗುತ್ತಿದ್ದೆ. ಆಗ ಜೈಲಿಗೆ ಹೋದರೆ ಹೆಮ್ಮೆ ಇತ್ತು, ಇಂದು ಜೈಲಿಗೆ ಹೋದರೆ ಗೌರವಿಲ್ಲ. ಹಾಗಾಗಿ ತಪ್ಪು ದಾರಿ ಹಿಡಿಯಬೇಡಿ ಎಂದು ಅನುಭವ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಬಿ ಹಿಮ್ಮಡಿ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.