ಕನ್ನಡಪ್ರಭ ವಾರ್ತೆ ಜಮಖಂಡಿ

ಕೃಷ್ಣಾ ನದಿಗೆ ಹಿಪ್ಪರಗಿ ಜಲಾಶಯದಿಂದ 1,08,084 ಕ್ಯುಸೆಕ್‌ ನೀರು ಹರಿ ಬಿಡಲಾಗಿದ್ದು, ಮಂಗಳವಾರ ನದಿ ಭರ್ತಿಯಾಗಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ವಾರದ ಹಿಂದೆ ಮಳೆ ಕೊರತೆ ಹಾಗೂ ಬರಗಾಲದ ಭೀತಿಯಿಂದ ಕಂಗಾಲಾಗಿದ್ದ ರೈತರಿಗೆ ಇದೀಗ ವರುಣದೇವ ಕೃಪೆ ತೋರಿದ್ದಾನೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ನೀರು ಆಗಮಿಸಿದೆ. ಈ ಬೆಳವಣಿಗೆ ನದಿ ತೀರದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ಮುಂಗಾರು ಕೃಷಿಗೆ ಹೊಸ ಚೈತನ್ಯ ತಂದಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯೊಂದಿಗೆ ಅದರ ಪ್ರಮುಖ ಉಪನದಿಗಳಾದ ಕೊಯ್ನಾ, ವಾರಣಾ, ಪಂಚಗಂಗಾ ಸೇರಿ ಹಲವು ನದಿಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದೆ.

ಈ ನೀರು ಹಂತ ಹಂತವಾಗಿ ಕರ್ನಾಟಕದ ಗಡಿಭಾಗದತ್ತ ಹರಿದು ಬರುತ್ತಿದ್ದು, ಅದರ ಪರಿಣಾಮವಾಗಿ ಕೃಷ್ಣಾ ನದಿಯ ಒಳ ಹರಿವು ಹೆಚ್ಚಳ ಕಂಡಿದೆ. ಪ್ರಸ್ತುತ ಹಿಪ್ಪರಗಿ ಬ್ಯಾರೇಜಿನ 10 ಗೇಟ್‌ಗಳನ್ನು ತೆರೆಯುವ ಮೂಲಕ ಹೆಚ್ಚುವರಿ ನೀರನ್ನು ಕೆಳಭಾಗಕ್ಕೆ ಹರಿಸಲಾಗುತ್ತಿದೆ.

ಇದೇ ವೇಳೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಸುಮಾರು 42,625 ಕ್ಯೂಸೆಕ್ ನೀರನ್ನು ಕೆಳಭಾಗದತ್ತ ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷ್ಣಾ ನದಿಯ ಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಚಿಕ್ಕಪಡಸಲಗಿ ಬ್ಯಾರೇಜ್ ಮೂಲಕ ಹರಿಯುತ್ತಿರುವ ಕೃಷ್ಣಾ ನದಿಯ ಮನಮೋಹಕ ದೃಶ್ಯ ಸ್ಥಳೀಯರು ಹಾಗೂ ರೈತರನ್ನು ಆಕರ್ಷಿಸಿದೆ. ಕಳೆದ ಕೆಲವು ವಾರಗಳಿಂದ ಬರದ ಭೀತಿಯಿಂದ ಕಂಗಾಲಾಗಿದ್ದ ರೈತರು ಇದೀಗ ಬ್ಯಾರೇಜ್‌ಗೆ ಭೇಟಿ ನೀಡಿ ಹರಿಯುತ್ತಿರುವ ನೀರನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.


ಬ್ಯಾರೇಜ್‌ಗೆ ನೀರು ಹರಿದು ಬರುತ್ತಿರುವುದರಿಂದ ನೀರಾವರಿ ಯೋಜನೆಗಳಿಗೆ ಅನುಕೂಲವಾಗಲಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಲಭ್ಯವಾಗುವ ವಿಶ್ವಾಸ ಹೆಚ್ಚಾಗಿದೆ. ಮಹಾರಾಷ್ಟ್ರದ ವಿವಿಧ ಜಲಾನಯನ ಪ್ರದೇಶಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣವೂ ಗಮನಾರ್ಹವಾಗಿದೆ. ಕೊಯ್ನಾ ಪ್ರದೇಶದಲ್ಲಿ 11.6 ಸೆಂ.ಮೀ, ಮಹಾಬಳೇಶ್ವರದಲ್ಲಿ 16.0 ಸೆಂ.ಮೀ, ನವುಜಾದಲ್ಲಿ 17.9 ಸೆಂ.ಮೀ, ತರಾಳಿಯಲ್ಲಿ 8.1 ಸೆಂ.ಮೀ, ವಾರಣಾದಲ್ಲಿ 7.2 ಸೆಂ.ಮೀ ಹಾಗೂ ರಾಧಾನಗರಿಯಲ್ಲಿ 23.8 ಸೆಂ.ಮೀ ಮಳೆಯಾಗಿದೆ. ಈ ಮಳೆಯೇ ಕೃಷ್ಣಾ ನದಿಗೆ ಹೊಸ ಜೀವ ತುಂಬಿದ್ದು, ಕರ್ನಾಟಕದ ಜಲಾಶಯಗಳು ಹಾಗೂ ಬ್ಯಾರೇಜ್‌ಗಳಿಗೆ ಜೀವಜಲವಾಗಿ ಪರಿಣಮಿಸಿದೆ.