ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸರಳ ಸಜ್ಜನಿಕೆ, ಸಹೃದಯಿ ನಡೆ-ನುಡಿ ಮತ್ತು ಪರೋಪಕಾರಿ ವ್ಯಕ್ತಿತ್ವ ಹೊಂದಿದ್ದ ಜಿನೈಕ್ಯ ದಿ.ವಸಂತ ನಿಲಜಗಿ ಅವರು ಮರೆಯಾದರೂ ಮರೆಯಲಾಗದ ಮಾಣಿಕ್ಯ ಎನಿಸಿದ್ದಾರೆ. ಹುಕ್ಕೇರಿ ಅಭಿವೃದ್ಧಿ ಮತ್ತು ಸರ್ವ ಸಮಾಜದ ಏಳಿಗೆಗೆ ಅಪಾರ ಕೊಡುಗೆ ನೀಡುವ ಮೂಲಕ ಸಾರ್ವಜನಿಕ ಜೀವನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಬಣ್ಣಿಸಿದರು.

ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ ಜಿನೈಕ್ಯ ದಿ.ವಸಂತ ನಿಲಜಗಿ ಅವರ 8ನೇ ಪುಣ್ಯಸ್ಮರಣೆ ಮತ್ತು ನೂತನ ಗ್ರಂಥಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದರ್ಶ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ವಸಂತ ನಿಲಜಗಿಯವರ ಸಮಾಜಮುಖಿ ಸೇವೆ, ತ್ಯಾಗ, ಪ್ರೀತಿ ಇವೆಲ್ಲವೂ ಈ ಭಾಗದ ಪ್ರತಿಯೊಬ್ಬರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದು ಜನರ ಮನದಲ್ಲಿ ಎಂದಿಗೂ ಅಜರಾಮರರಾಗಿದ್ದಾರೆ ಎಂದರು.ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯದಲ್ಲಿ ಗಮನಾರ್ಹ ಕೆಲಸಗಳ ಮೂಲಕ ವಸಂತ ನಿಲಜಗಿಯವರು ಇಲ್ಲಿನ ಜನರ ಹೃದಯವಂತ ಪರಂಪರೆಯನ್ನು ಸಂರಕ್ಷಿಸಿದ್ದಾರೆ. ಅಪಾರ ಅನುಭವದೊಂದಿಗೆ ಈ ಭಾಗದ ಅಭಿವೃದ್ಧಿಗೆ ಸಮೃದ್ಧ ಕೊಡುಗೆಗಳನ್ನು ನೀಡಿದ್ದಾರೆ. ಇದರೊಂದಿಗೆ ಹುಕ್ಕೇರಿ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಂಥ ಶ್ರೇಷ್ಠ ನಾಯಕರ ಸೇವೆ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗದು ಎಂದು ತಿಳಿಸಿದರು.ಎರಡೂವರೆ ದಶಕಕ್ಕೂ ಹಿಂದೆ ವಸಂತ ನಿಲಜಗಿಯವರು ಸಹಕಾರಿ ಬ್ಯಾಂಕ್ ಸ್ಥಾಪಿಸಿ ಆರ್ಥಿಕ ಸದೃಢತೆ, ಶಿಕ್ಷಣ ಸಂಸ್ಥೆ ಆರಂಭಿಸಿ ಅಕ್ಷರ ಕ್ರಾಂತಿ, ಜೈನ ಬಸದಿಗಳ ಜೀರ್ಣೋದ್ಧಾರಗೊಳಿಸಿ ಧಾರ್ಮಿಕ ಪರಂಪರೆ ಶ್ರೀಮಂತಿಕೆ, ಸಮಾಜಮುಖಿ ಮತ್ತು ಅಭಿವೃದ್ಧಿ ಕಾರ್ಯಗಳಿಂದ ರಾಜಕೀಯದಲ್ಲಿ ಅಜಾತಶತ್ರು ಎನಿಸಿದ್ದರು. ವಿವಿಧ ಜನಪರ ಸಂಸ್ಥೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಆದರ್ಶಗಳು ನಮಗೆ ಸದಾ ಪ್ರೇರಣೆಯಾಗಿವೆ. ಸಮಾಜಮುಖಿ ಕೆಲಸಗಳು ಸ್ಫೂರ್ತಿಯಾಗಿವೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗುತ್ತಿದ್ದು ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎಂದರು.ಈ ವೇಳೆ ಪದ್ಮಶ್ರೀ ಮಹಾವೀರ ನಿಲಜಗಿ, ರೋಹಿತ ಚೌಗಲಾ, ಸಂಜಯ ನಿಲಜಗಿ, ಬಾಹುಬಲಿ ಸೊಲ್ಲಾಪುರೆ, ಪ್ರಜ್ವಲ್ ನಿಲಜಗಿ, ಅನುಪಮಾ ಅಕ್ಷಯ ಕಬಾಡಗಿ, ಕಿರಣ ಸೊಲ್ಲಾಪುರೆ, ಅಕ್ಕಪ್ಪ ಖತಗಲ್ಲಿ, ರಾಜೇಂದ್ರ ಪಾಟೀಲ, ಸಂತೋಷ ರಜಪೂತ ಮತ್ತಿತರರು ಉಪಸ್ಥಿತರಿದ್ದರು.8ನೇ ಪುಣ್ಯಸ್ಮರಣೆ ಹಿನ್ನೆಲೆ ವಸಂತ ನಿಲಜಗಿ ಅವರ ಪ್ರತಿಮೆಗೆ ಕುಟುಂಬಸ್ಥರು, ಹಿತೈಷಿಗಳು, ಬ್ಯಾಂಕ್ ಸಿಬ್ಬಂದಿ ಮತ್ತು ಶಿಕ್ಷಣ ಸಂಸ್ಥೆ ಸಿಬ್ಬಂದಿಯರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಅರ್ಪಿಸಿ, ಆ ಮಹಾನ್ ಚೇತನಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.ಹೈಟೆಕ್ ಗ್ರಂಥಾಲ ಉದ್ಘಾಟನೆ:

ಜ್ಞಾನದಾಹಕ್ಕೆ ನೂತನ ಗ್ರಂಥಾಲಯ ಇನ್ನು ಜಿನೈಕ್ಯ ದಿ.ವಸಂತ ನಿಲಜಗಿ ಅವರ ಸವಿನೆನಪಿಗಾಗಿ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಿದ ಹೈಟೆಕ್ ಗ್ರಂಥಾಲವನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಐಎಎಸ್, ಐಪಿಎಸ್, ಎನ್‌ಡಿಎ, ಯುಪಿಎಸ್‌ಸಿ, ಕೆಪಿಎಸ್‌ಸಿ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಯುವ ಸಮೂಹಕ್ಕೆ ಈ ಗ್ರಂಥಾಲಯ ಸಾಕಷ್ಟು ನೆರವಾಗಲಿದೆ. ಇದರೊಂದಿಗೆ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯು ಈ ಭಾಗದ ವಿದ್ಯಾವಂತ ಯುವಕ-ಯುವತಿಯರಿಗೆ ಹೆಚ್ಚಿನ ಜ್ಞಾನಾರ್ಜನೆಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ವಸಂತ ನಿಲಜಗಿ ಗ್ರಂಥಾಲಯ ಆರಂಭಿಸಿದೆ.