ಕೊಪ್ಪಳ:
ನಗರದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಮತ್ತೆ ಶುಕ್ರವಾರ ಪರದಾಡಿದರು. ಈ ವೇಳೆ ರೈತರೊಬ್ಬರು ಪೊಲೀಸರ ಕಾಲಿಗೆ ಬಿದ್ದು ಗೊಬ್ಬರಕ್ಕೆ ಅಂಗಲಾಚಿದರು. ಸರತಿ ಸಾಲಿನಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಪಾಲಕರಿಗೆ ಶಾಲೆ ಬಿಡಿಸಿ ಈ ರೀತಿ ಕರೆದುಕೊಂಡು ಬರಬಾರದೆಂದು ಬುದ್ಧಿ ಹೇಳಿ ಮರಳಿ ಕಳಿಸಿದ ಪ್ರಸಂಗವೂ ನಡೆಯಿತು.ಕಳೆದ ನಾಲ್ಕಾರು ದಿನಗಳಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರು ಅಂಗಡಿ-ಅಂಗಡಿಗೆ ಅಲೆಯುತ್ತಿದ್ದಾರೆ. ಶುಕ್ರವಾರ ಯೂರಿಯಾ ಗೊಬ್ಬರ ಬಂದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಪೊಲೀಸರ ಸರ್ಪಗಾವಲಿನಲ್ಲಿ ಯೂರಿಯಾ ಗೊಬ್ಬರವನ್ನು ಗೋದಾಮಿಗೆ ಸಾಗಿಸಿದ ನಂತರ ಕೊಪ್ಪಳದಿಂದ ಬೇರೆ ಗ್ರಾಮಗಳಿಗೆ ಬಂದೋಬಸ್ತ್‌ನಲ್ಲಿ ಕಳುಹಿಸಿಕೊಡಲಾಯಿತು.
ಅಡ್ಡ ಮಲಗಿದ ರೈತರು:ಯೂರಿಯಾ ಗೊಬ್ಬರವನ್ನು ರೈಲ್ವೆ ರೇಖಗಳಿಂದ ತಂದು ಗೋದಾಮು ಹಾಗೂ ಬೇರೆ ಊರಿನ ಸೊಸೈಟಿಗೆ ಕಳುಹಿಸಿಕೊಡಲು ಮುಂದಾದಾಗ ಹೊಸಪೇಟೆ ರಸ್ತೆಯಲ್ಲಿ ಲಾರಿಗಳಿಗೆ ಅಡ್ಡ ಮಲಗಿ ನಮಗೆ ಯೂರಿಯಾ ಗೊಬ್ಬರ ಕೊಡಿ ಎಂದು ರೈತರು ಪಟ್ಟು ಹಿಡಿದರು. ಹೀಗಾಗಿ ಪುನಃ ಲಾರಿಗಳನ್ನು ಗೋದಾಮಿಗೆ ಕಳಿಸಲಾಯಿತು. ನಾಲ್ಕು ಲಾರಿಯನ್ನು ಅಡ್ಡಗಟ್ಟಿದ್ದೇವೆ, ಮರಳಿ ಗೋದಾಮಿಗೆ ಬಂದಾಗ ಕೇವಲ ಎರಡೇ ಲಾರಿ ಇದ್ದವು ಎಂದು ರೈತರು ಆಕ್ಷೇಪಿಸಿದರು.
ಪ್ರತ್ಯೇಕ ವಿತರಣೆ:ಗೊಬ್ಬರ ಹಂಚಿಕೆ ಸವಾಲಾಗಿದ್ದರಿಂದ ಕೊಪ್ಪಳ ಟಿಎಪಿಎಂಎಸ್‌ನಲ್ಲಿ ರೈತರಿಂದ ಆಧಾರ್ ಕಾರ್ಡ್ ಪಡೆದು ಪ್ರತಿಯೊಬ್ಬರಿಗೆ ಎರಡು ಚೀಲಗಳ ಚೀಟಿ ನೀಡಲಾಯಿತು. ಈ ಚೀಟಿಗಳ ಆಧಾರದಲ್ಲಿ ಕೊಪ್ಪಳದ ಬನ್ನಿಕಟ್ಟಿ ಏರಿಯಾದಲ್ಲಿರುವ ಗೋದಾಮಿನಲ್ಲಿ ವಿತರಿಸಲಾಯಿತು. ಇದರಿಂದ ಸ್ವಲ್ಪ ತಹಬಂದಿಗೆ ಬಂದಿತಾದರೂ ರೈತರು ಬೇಕಾದಷ್ಟು ಗೊಬ್ಬರ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರದಿಯಲ್ಲಿ ವಿದ್ಯಾರ್ಥಿಗಳು:ಒಬ್ಬ ರೈತರಿಗೆ ಎರಡು ಚೀಲ ಮಾತ್ರ ಗೊಬ್ಬರ ಕೊಡಲಾಗುವುದು ಎಂದು ಹೇಳಿದ್ದರಿಂದ ವಿದ್ಯಾರ್ಥಿಗಳನ್ನು ಶಾಲಾ ಸಮವಸ್ತ್ರದಲ್ಲಿಯೇ ಕರೆದುಕೊಂಡು ಪಾಲಕರು ಸರತಿಯಲ್ಲಿ ನಿಲ್ಲಿಸಿದ್ದರು. ಹೊಸಳ್ಳಿಯ 7ನೇ ತರಗತಿ ವಿದ್ಯಾರ್ಥಿಗಳು ನೂಕಾಟದ ನಡುವೆಯೇ ನಿಂತಿದ್ದಲ್ಲದೆ ನಾನು ಶಾಲೆ ಬಿಟ್ಟು ಗೊಬ್ಬರಕ್ಕಾಗಿ ನಮ್ಮಪ್ಪನ ಜತೆ ಬಂದಿದ್ದೇನೆ ಎಂದು ಹೇಳಿದ. ಹೀಗೆ, ಅನೇಕ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತಿದ್ದರು. ಇದನ್ನು ನೋಡಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ವಿದ್ಯಾರ್ಥಿಯನ್ನು ತಬ್ಬಿಕೊಂಡರು. ಪಾಲಕರಿಗೆ ಬುದ್ಧಿ ಹೇಳಿ ಇನ್ನೊಮ್ಮೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರದೆ ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿ ಹೇಳಿದರು. ಆದರೆ, ಏನ್ ಮಾಡಬೇಕು ಸರ್? ಇಲ್ಲಿ ಪಾಳೆಯಲ್ಲಿ ನಿಂತರೆ ಗೊಬ್ಬರ ಸಿಗುತ್ತದೆ. ಒಬ್ಬೊಬ್ಬರೇ ನಿಂತರೆ ನಮಗೆ ಬೇಕಾಗುವಷ್ಟು ಗೊಬ್ಬರ ಸಿಗುವುದಿಲ್ಲ ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಮಹಿಳಾ ರೈತರ ಗೋಳು:ಮಹಿಳಾ ರೈತರು ಸಹ ವರಮಹಾಲಕ್ಷ್ಮಿ ಹಬ್ಬ ಬಿಟ್ಟು ಯೂರಿಯಾ ರಸಗೊಬ್ಬರ ಪಡೆಯಲು ಬಂದು ಸರದಿಯಲ್ಲಿ ನಿಂತಿದ್ದರು. ಏನ್ ಮಾಡೋಣ ಸಾರ್? ಬಂದಿರುವ ಬೆಳೆಗೆ ಯೂರಿಯಾ ಹಾಕದೆ ಇದ್ದರೆ ಹಾಳಾಗಿ ಹೋಗುತ್ತದೆ. ಗೊಬ್ಬರ ಸಿಕ್ಕರೆ ಅದೇ ನಮಗೆ ವರಮಹಾಲಕ್ಷ್ಮಿ ಹಬ್ಬ ಎಂದು ರೈತ ಮಹಿಳೆ ತನ್ನ ಅಳಲು ತೋಡಿಕೊಂಡಳು.
ಸ್ಥಳದಲ್ಲಿಯೇ ಡಿಸಿ ಮೊಕ್ಕಾಂ:ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಕೃಷಿ ಇಲಾಖೆಯ ಜೆಡಿ ಟಿ. ರುದ್ರೇಶಪ್ಪ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಯೂರಿಯಾ ಗೊಬ್ಬರ ವಿತರಣೆ ಮೇಲುಸ್ತುವಾರಿ ವಹಿಸಿದರು.