ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿತ್ತು. ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಸಾಧಾರಣ ಮಳೆಯಾಗಿದೆ.
ಗೋಡೆ ಕುಸಿದು-ಮಹಿಳೆಗೆ ಗಾಯ:ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದಲ್ಲಿ ಮನೆ ಬಿದ್ದು, ಕುಂಬಾರ ಹನುಮಕ್ಕ ಎಂಬ ಮಹಿಳೆ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಮಳೆಯಿಂದಾಗಿ ಇವರ ಮೇಲೆ ಗೋಡೆ ಕುಸಿದಿದೆ. ಗಾಯಗೊಂಡಿರುವ ಇವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳಲ್ಲಿ ಮಳೆಯಿಂದ ತಲಾ ಒಂದೊಂದು ಮನೆಗಳು ಬಿದ್ದಿವೆ. ಕೊಟ್ಟೂರು ತಾಲೂಕಿನಲ್ಲೂ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ಕೊಟ್ಟೂರು ಕೆರೆಗೆ ನೀರು ಹರಿದು ಬರುತ್ತಿದೆ. ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ ಮತ್ತು ಹರಪನಹಳ್ಳಿ ಭಾಗದಲ್ಲೂ ಮಳೆಯಾಗಿದೆ. ಈಗಾಗಲೇ ಕಂದಾಯ ಇಲಾಖೆ ಕೂಡ ಮಳೆಗಾಲ ಜೋರಾಗಿದ್ದು, ರೈತರು, ಕೃಷಿ ಕೂಲಿ ಕಾರ್ಮಿಕರು, ಕುರಿಗಾರರು, ದನಗಾಹಿಗಳು ಎಚ್ಚರಿಕೆ ವಹಿಸಬೇಕು. ಆದಷ್ಟು ಸಿಡಿಲಿನಿಂದ ಬಚಾವ್ ಆಗಲು ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಮಳೆ ಆರಂಭಗೊಂಡ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚನೆ ರವಾನಿಸಿದೆ.ಸಿಡಿಲು ಬಡಿದು ಯುವಕ ಸಾವು:
ಗ್ರಾಮದ ಕೆ. ಚಂದ್ರಶೇಖರ (29) ಮೃತರು.ಮುಸುಕಿನ ಜೋಳದ ಬೆಳೆಯನ್ನು ಕಾಡು ಹಂದಿಗಳಿಂದ ರಕ್ಷಿಸಲು ಹೊಲಕ್ಕೆ ತೆರಳಿದ್ದರು. ಮಳೆಯಿಂದಾಗಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಬೆನ್ನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಜತೆಗಿದ್ದ ಅವರ ಗೆಳೆಯ ಮಹೇಂದ್ರ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಕೆ. ಕವಿತಾ ಭೇಟಿ ನೀಡಿದರು.ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.