ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹಸುಗಳಿಗೆ ಹುಲ್ಲು ಕೊಯ್ಯಲೆಂದು ತೆರಳಿದ್ದ ಬಡಗಲಪುರ ಗ್ರಾಮದ ಬಸವಣ್ಣ (65) ಮೇಲೆ ಹುಲಿ ದಾಳಿ ಮಾಡಿ ಕೊಂದು ಮಾಂಸ ಭಕ್ಷಿಸಿದೆ. ಬಸವಣ್ಣ ಮಧ್ಯಾಹ್ನದ ಸಮಯ ಜಮೀನಿಗೆ ಹುಲ್ಲು ಕೊಯ್ಯಲೆಂದು ತೆರಳಿ ಸಂಜೆಯಾದರೂ ಹಿಂತಿರುಗದಿದ್ದರಿಂದ ಸಂಬಂಧಿಕರು ಜಮೀನಿಗೆ ತೆರಳಿದ್ದಾಗ ಹುಲಿ ದಾಳಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರಯತನ ಸಾವಿನಿಂದ ಬಡಗಲಪುರ ಗ್ರಾಮದಲ್ಲಿ ಮನೆಮಾಡಿದ್ದ ಗೌರಿ ಗಣೇಶ ಹಬ್ಬದ ಸಂಭ್ರಮ ಕಮರಿದೆ.
ರೈತ ಬಸವಣ್ಣ ಅವರ ಕುಟುಂಬವನ್ನು ಮಂಗಳವಾರ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸರ್ಕಾರದಿಂದ 5 ಲಕ್ಷ ರು. ಪರಿಹಾರ ವಿತರಿಸಿ ಉಳಿದ 15 ಲಕ್ಷ ರು. ಪರಿಹಾರವನ್ನು ಶೀಘ್ರವೇ ನೀಡಲಾಗುವುದು. ಮೃತನ ಕುಟುಂಬಕ್ಕೆ ಮಾಸಿಕ 4 ಸಾವಿರ ರು. ಹಣ ಜತೆಗೆ ಡಿ ಗ್ರೂಪ್ ಉದ್ಯೋಗ ನೀಡುವ ಭರವಸೆ ಕೊಟ್ಟರು. ಬಳಿಕ, ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳಿಗೆ ನರಹಂತಕ ಹುಲಿಯನ್ನು ಕೂಡಲೇ ಸೆರೆ ಹಿಡಿಯಿರಿ, ಕಾಡಂಚಿನ ಗ್ರಾಮಗಳಲ್ಲಿ ಎಷ್ಟು ಹುಲಿಗಳಿಗೆ ಎಂಬುದನ್ನು ಮೊದಲು ಗುರುತಿಸಿ, ಆದಷ್ಟು ಬೇಗ ಅರವಳಿಕೆ ಚುಚ್ಚುಮದ್ದು ಕೊಟ್ಟು ಹುಲಿ ಸೆರೆ ಹಿಡಿಯಿರಿ ಎಂದು ನಿರ್ದೇಶನ ನೀಡಿದರು.ಇನ್ನು, ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಸಿ.ಪುಟ್ಟರಂಗಶೆಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹುಲಿಯನ್ನು ತಕ್ಷಣವೇ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು, ನೀರು-ಆಹಾರ ಮತ್ತು ಮರಿಗಳ ರಕ್ಷಣೆಗಾಗಿ ಕಾಡಿನಿಂದ ನಾಡಿಗೆ ಬರುತ್ತಿರುವುದರಿಂದ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಘಟನೆ ಬಳಿಕ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳದಲ್ಲೇ ಬೀಡು ಬಿಟ್ಟು. ಹುಲಿ ಸೆರೆಗಾಗಿ ಕಬ್ಬಿನ ಗದ್ದೆಯಲ್ಲಿ ಕೊಟ್ಟಿಗೆ ಮಾದರಿ ಬೋನ್ ಅಳವಡಿಸಿ ಸಣ್ಣ ಕರುವನ್ನು ಕಟ್ಟಿಹಾಕಿ ಹುಲಿ ಸೆರೆಗೆ ಕಾಯುತ್ತಿದ್ದಾರೆ. ಅಲ್ಲದೆ ಹುಲಿಯ ಚಲನವಲನಗಳನ್ನ ಗಮನಿಸಲು ಡ್ರೋನ್ ಕ್ಯಾಮೆರಾ ಬಳಕೆ ಮಾಡುತ್ತ, ಘಟನಾ ಸ್ಥಳದ ಸುತ್ತಮುತ್ತ ಹುಲಿ ಹೆಜ್ಜೆ ಗುರುತು ಪತ್ತೆ ಮಾಡುತ್ತ, ಹುಲಿ ಸೆರೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ರೈತ ಬಸವಣ್ಣ ಅಳಿಯ ಗಂಗಾಧರ್ ಮಾತನಾಡಿ, ಬಸವಣ್ಣ ಅವರು ಮಧ್ಯಾಹ್ನ ಹುಲ್ಲು ಕೊಯ್ಯಲೆಂದು ತೆರಳಿ ಸಂಜೆಯಾದರೂ ಮನೆಗೆ ವಾಪಾಸ್ ಬರದ ಹಿನ್ನೆಲೆ ನಾನು, ಸಂತೋಷ್, ಜಗದೀಶ್ ಹಾಗೂ ಚಂದ್ರು ಎಂಬ ನಾಲ್ಕು ಮಂದಿ ಜಮೀನಿಗೆ ತೆರಳಿ ಕೂಗಾಗಿ ಕಿರುಚಾಡಿದರೂ ಯಾವು ಶಬ್ಧವೂ ಬರಲಿಲ್ಲ, ನಾನು 20 ಅಡಿ ಅಂತರದಲ್ಲಿ ಮಾವ, ಮಾವ ಎಂದು ಕೂಗುತ್ತಾ ನಡೆಯುತ್ತಿದ್ದಾತ ಅಂಗಾತ ಮಲಗಿ ಹುಲಿ ಮಾಂಸ ತಿನ್ನುತ್ತಾ ಕುಳಿತಿತ್ತು, ನಮ್ಮನ್ನು ನೋಡಿದ ಕೂಡಲೇ ಹುಲಿ ಓಡಿತು. ಈ ಹಿಂದೆಯೂ ಕೂಡ ನಮ್ಮ ಮಾವ ಬಸವಣ್ಣ ಅವರ ಹಸುವನ್ನೂ ಕೂಡ ಹುಲಿ ತಿಂದು ಹಾಕಿತ್ತು. ಈಗ್ಗೆ ಮೂರು ದಿನಗಳ ಹಿಂದೆಯೂ ತೋಟದ ಮನೆಗಳತ್ತ ಹುಲಿ ಬಂದಿದೆ, ಅರಣ್ಯ ಇಲಾಖೆಗೆ ಸಾಕಷ್ಟು ಮನವಿ- ದೂರು ಕೊಟ್ಟರೂ ಯಾಬುದೇ ಪ್ರಯೋಜನವಾಗಿಲ್ಲ. ಜತೆಗೆ, ಆ ಪ್ರದೇಶದಲ್ಲಿ ಎರಡರಿಂದ ಮೂರು ಹುಲಿಗಳಿರುವ ಸಾಧ್ಯತೆ ಇದೆ ಎಂದರು. ಮೃತರ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕು, ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ.