ರೈತ ಮುಖಂಡ ಜಿ.ಪುರುಷೋತ್ತಮಗೌಡಗೆ ಹಂಪಿ ಕನ್ನಡ ವಿವಿಯಿಂದ ಡಿ.ಲಿಟ್ ಪದವಿ

KannadaprabhaNewsNetwork |  
Published : Jan 24, 2025, 12:46 AM IST
ಬಳ್ಳಾರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಅವರು ಹಂಪಿ ಕನ್ನಡ ವಿವಿ ನೀಡಿರುವ ಡಿಲಿಟ್‌ ಪದವಿ ಹಾಗೂ ಜಲಾಶಯದ ಅಧ್ಯಯನದ ಮಹತ್ವ ಕುರಿತು ತಿಳಿಸಿದರು.  | Kannada Prabha

ಸಾರಾಂಶ

2022ರಲ್ಲಿ ವಿವಿಯಲ್ಲಿ ಅಧ್ಯಯನ ಆರಂಭಿಸಲಾಯಿತು.

ಬಳ್ಳಾರಿ: ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ, ಹಿರಿಯ ರೈತ ಹೋರಾಟಗಾರ ಜಿ.ಪುರುಷೋತ್ತಮಗೌಡ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್‌ ಪದವಿ ನೀಡಿದೆ. ವಿಜ್ಞಾನ ನಿಕಾಯದಲ್ಲಿ "ತುಂಗಭದ್ರಾ ಜಲಾಶಯ ಒಂದು ಅಧ್ಯಯನ " ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿದೆ.

ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಪುರುಷೋತ್ತಮಗೌಡ, 2022ರಲ್ಲಿ ವಿವಿಯಲ್ಲಿ ಅಧ್ಯಯನ ಆರಂಭಿಸಲಾಯಿತು. ಈ ಅಧ್ಯಯನದಿಂದ ತುಂಗಭದ್ರಾ ಜಲಾಶಯದ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಯಿತು. 1772ರಿಂದ 1858ರವರೆಗೆ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಹಾಗೂ ಆಂಧ್ರಪ್ರದೇಶದ ಕರ್ನೂಲ್, ಕಡಪ, ಅನಂತಪುರ, ತೆಲಂಗಾಣ, ಮೆಹಬೂಬ್‌ನಗರ, ಗದ್ವಾಲ್ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಅತ್ಯಂತ ಭೀಕರ ಬರಗಾಲಕ್ಕೆ ಒಳಗಾಗಿ ಲಕ್ಷಾಂತರ ಜನರು ಮತ್ತು ಜಾನುವಾರು, ಪಶುಪಕ್ಷಿಗಳು ಸಾವಿಗೀಡಾದ ಕುರಿತು ಅಧ್ಯಯನ ನಡೆಸಿದೆ. ಮದ್ರಾಸ್ ಮತ್ತು ಹೈದ್ರಾಬಾದ್ ಸರ್ಕಾರಗಳು ಜಲಾಶಯ ನಿರ್ಮಾಣ ಮಾಡಲು ಕೈಗೊಂಡ ತೀರ್ಮಾನ ಕುರಿತು ಅಧ್ಯಯನದ ಪ್ರಬಂಧದಲ್ಲಿ ವಿವರಿಸಲಾಗಿದೆ. ಜಲಾಶಯದ ನೀರಿನ ಹಂಚಿಕೆ, 86 ಸಾವಿರ ಎಕರೆಯಲ್ಲಿ ನೀರಿನ ಪ್ರಾಂತ, 90 ಹಳ್ಳಿಗಳ ಸ್ಥಳಾಂತರ, ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳು ತೆರವುಗೊಳಿಸಲು ಸಲಹೆಗಳು, ಜಲಾಶಯಕ್ಕೆ ಬರುತ್ತಿರುವ ಕಲುಷಿತ ನೀರು, ಶುದ್ಧೀಕರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು, ನವಲಿ ಬಳಿ ಪರ್ಯಾಯ ಜಲಾಶಯದ ನಿರ್ಮಾಣದ ಸಾಧಕ-ಬಾಧಕಗಳು, ಕೃಷ್ಣ ಮತ್ತು ತುಂಗಭದ್ರಾ ನದಿಗಳ ಜೋಡಣೆ ಸೇರಿದಂತೆ ಅನೇಕ ಮಾಹಿತಿಯನ್ನು ಸಂಗ್ರಹಿಸಿ, ಪ್ರಬಂಧ ಮಂಡಿಸಲಾಗಿದೆ ಎಂದರು.

ತುಂಗಭದ್ರಾ ರೈತ ಸಂಘದ ಜಿಲ್ಲಾ ಪ್ರಮುಖರಾದ ಶಿವಯ್ಯ ಕೃಷ್ಣನಗರ ಕ್ಯಾಂಪ್, ಕೊಂಚಿಗೇರಿ ಮಲ್ಲಪ್ಪ, ಚನ್ನಪಟ್ಟಣ ಖಾಜಾವಲಿಸಾಬ್, ಶ್ರೀಧರಗಡ್ಡೆ ವೀರನಗೌಡ, ಮುಷ್ಠಗಟ್ಟೆ ಭೀಮನಗೌಡ, ಸಂಗನಕಲ್ಲು ದೊಡ್ಡದಾಸಪ್ಪ, ಎಮ್ಮಿಗನೂರು ರಾಜಾಸಾಬ್, ಜಿ.ಸಾಗರಗೌಡ ದರೂರು, ಶ್ರೀಕಾಂತರಾವ್ ದರೂರು ಕ್ಯಾಂಪ್, ತಿಪ್ಪೇರುದ್ರಗೌಡ, ವೀರೇಶಗೌಡ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ