ಕನಕಗಿರಿ:
ಜಮೀನಿನಲ್ಲಿದ್ದ ತಗಡಿನ ಶೆಡ್‌ಗೆ ಸಿಡಿಲು ಬಡಿದು ಪರಿಣಾಮ ರೈತ ಹಾಗೂ ಎತ್ತು ಮೃತಪಟ್ಟ ಘಟನೆ ತಾಲೂಕಿನ ಹುಲಿಹೈದರ್ ಹೊರವಲಯದಲ್ಲಿ ಮಂಗಳವಾರ ನಡೆದಿದೆ.ಯಂಕಪ್ಪ ಜಾಡಿ (45) ಮೃತ ರೈತ.
ಮಂಗಳವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲು ತಗಡಿನ ಶೆಡ್‌ಗೆ ಬಡಿದ ಪರಿಣಾಮ ರೈತ ಹಾಗೂ ಒಂದು ಎತ್ತು ಸ್ಥಳದಲ್ಲಿಯೇ ಮೃತಪಟ್ಟಿವೆ. ಸ್ಥಳೀಯರ ಮಾಹಿತಿ ಮೇರೆಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸ್ಥಳದಲ್ಲಿಯೇ ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಧನದ ಆದೇಶದ ಪ್ರತಿಯನ್ನು ನೀಡಿದರು.ಘಟನಾ ಸ್ಥಳಕ್ಕೆ ಜಿಪಂ ಮಾಜಿ ಅಧ್ಯಕ್ಷ ಸುಜಾತ ನಾಯಕ, ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಾ ನಾಯಕ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಉಪ ತಹಸೀಲ್ದಾರ್ ಶರಣಪ್ಪ, ಕಂದಾಯ ನೀರಿಕ್ಷಕ ರವಿಕುಮಾರ, ಗ್ರಾಮ ಆಡಳಿತಾಧಿಕಾರಿ ಹಲೇಶ ಭೇಟಿ ನೀಡಿ ಪರಿಶೀಲಿಸಿದರು.
ತುಂಬಿ ಹರಿದ ಗುಡದೂರು ಹಳ್ಳ:ತಾಲೂಕಿನಾದ್ಯಂತ ಮಂಗಳವಾರ ಗಾಳಿ ಸಹಿತ ಭರ್ಜರಿ ಮಳೆಯಾಗಿದ್ದು ಹಳ್ಳ-ಕೊಳ್ಳ ತುಂಬಿ ಹರಿದಿವೆ.ಕರಡೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡದೂರು ಗ್ರಾಮದ ಹಳ್ಳ ತುಂಬಿ ಹರಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಗುಡದೂರು, ಸಿರಿವಾರ-ಗೋಡಿನಾಳ ಗುಡ್ಡದ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಈ ಹಳ್ಳ ತುಂಬಿ ಹರಿಯುತ್ತಿದೆ. ಇನ್ನೂ ದೊಡ್ಡ ಮಳೆಯಾದರೆ ಚೆಕ್ ಡ್ಯಾಂ, ಕೃಷಿ ಹೊಂಡಗಳು ತುಂಬಿ ಅಂತರ್ಜಲ ವೃದ್ಧಿಯಾಗಲಿದೆ. ಇದೇ ನೀರನ್ನು ತೋಟಗಳಿಗೆ ಹರಿಸಲು ಅನುಕೂಲವಾಗಲಿದೆ. ಬೇಸಿಗೆ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಕುಸಿತ ಕಂಡಿದ್ದ ಕೊಳವೆಬಾವಿಗಳು ಇದೀಗ ಚೇತರಿಸಿಕೊಳ್ಳುತ್ತಿವೆ ಎಂದು ಗ್ರಾಮದ ರೈತ ಕನಕಪ್ಪ ಮಂದಲಾರ ತಿಳಿಸಿದರು.ಕರಡೋಣ ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಬಹು ದಿನಗಳಿಂದ ಗುಡದೂರು ಹಳ್ಳ ತುಂಬಿರಲಿಲ್ಲ. ಒಂದೇ ಮಳೆಗೆ ಒಡ್ಡು, ಹೊಲ, ತೋಟಗಳಲ್ಲಿ ನೀರು ಹರಿದಿದ್ದು, ರೈತರು ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಗ್ರಾಪಂ ಅಧ್ಯಕ್ಷ ಹಿರೇ ಹನುಮಂತಪ್ಪ ಹೇಳಿದ್ದಾರೆ.