ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟಿಸಿದ ರೈತ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 19, 2025, 11:49 PM IST
ಫೋಟೊ ಶೀರ್ಷಿಕೆ: 19ಆರ್‌ಎನ್‌ಆರ್9ದನದ ಕೊಟ್ಟಿಗೆ ಕಟ್ಟಿಕೊಳ್ಳೋಕೆ ಹಣ ಬಿಡುಗಡೆ ಮಾಡದೇ ಸತಾಯಿಸಿದ ಹಿನ್ನೆಲೆಯಲ್ಲಿ ರೈತ ಚಂದ್ರಪ್ಪ ರಾಣಿಬೆನ್ನೂರು ತಾಲೂಕು ಕವಲೆತ್ತು ಗ್ರಾಪಂ ಮುಂಭಾಗದಲ್ಲಿ ತಮ್ಮ ಮನೆಯ ಹಸುಗಳನ್ನು ಕಟ್ಟಿರುವುದು.  | Kannada Prabha

ಸಾರಾಂಶ

ವೈಯಕ್ತಿಕ ಕಾಮಗಾರಿಗಳ ಸಾಮಗ್ರಿ ಬಿಲ್ಲುಗಳನ್ನು ತಾಂತ್ರಿಕ ದೋಷದ ನೆಪದಿಂದ ಇಲ್ಲಿಯವರೆಗೆ ಪಿಡಿಒ ಮತ್ತು ಕಾರ್ಯದರ್ಶಿ ಹಣ ಬಿಡುಗಡೆ ಮಾಡಲು ಸತಾಯಿಸಿದ್ದಾರೆ. ಇದರಿಂದ ಬೇಸತ್ತ ಚಂದ್ರಪ್ಪ ಅವರು ಕವಲೆತ್ತು ಗ್ರಾಪಂ ಕಚೇರಿ ಮುಂದೆ ತಮ್ಮ ಮನೆಯ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ.

ರಾಣಿಬೆನ್ನೂರು: ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡದೇ ಸತಾಯಿಸಿದ ಹಿನ್ನೆಲೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ರೈತರೊಬ್ಬರು ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಜರುಗಿದೆ.

2021ರಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮದ ಚಂದ್ರಪ್ಪ ಅವರ ತಾಯಿ ಫಕ್ಕಿರವ್ವ ಅವರಿಗೆ ವೈಯಕ್ತಿಕ ಕಾಮಗಾರಿಯಲ್ಲಿ ದನದ ಕೊಟ್ಟಿಗೆ ಮಂಜೂರಾಗಿತ್ತು. ಅದರಂತೆ ಅವರು ತಮ್ಮ ಸ್ವಂತ ಹಣದಲ್ಲಿ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ಆದರೆ ಸುಮಾರು ನಾಲ್ಕು ವರ್ಷಗಳಾದರೂ ವೈಯಕ್ತಿಕ ಕಾಮಗಾರಿಗಳ ಸಾಮಗ್ರಿ ಬಿಲ್ಲುಗಳನ್ನು ತಾಂತ್ರಿಕ ದೋಷದ ನೆಪದಿಂದ ಇಲ್ಲಿಯವರೆಗೆ ಪಿಡಿಒ ಮತ್ತು ಕಾರ್ಯದರ್ಶಿ ಹಣ ಬಿಡುಗಡೆ ಮಾಡಲು ಸತಾಯಿಸಿದ್ದಾರೆ. ಇದರಿಂದ ಬೇಸತ್ತ ಚಂದ್ರಪ್ಪ ಅವರು ಕವಲೆತ್ತು ಗ್ರಾಪಂ ಕಚೇರಿ ಮುಂದೆ ತಮ್ಮ ಮನೆಯ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಪ್ರತಿಭಟನೆಯ ಸುದ್ದಿ ತಿಳಿದು ತಾಪಂ ಇಒ ಪರಮೇಶ ಹಾಗೂ ಕುಮಾರಪಟ್ಟಣಂ ಪಿಎಸ್‌ಐ ಪ್ರವೀಣಕುಮಾರ ವಾಲಿಕಾರ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದರು. ಫಲಾನುಭವಿಗೆ ಶೀಘ್ರದಲ್ಲೇ ದನದ ಕೊಟ್ಟಿಗೆ ಬಿಲ್ ಪಾವತಿಸುವುದಾಗಿ ತಿಳಿಸಿದ್ದರಿಂದ ಚಂದ್ರಪ್ಪ ಪ್ರತಿಭಟನೆ ಹಿಂಪಡೆದರು.ಬಾಲಕನ ಮೇಲೆ ಬೀದಿನಾಯಿ ದಾಳಿ: ಗಾಯ

ಸವಣೂರು: ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಬೀದಿನಾಯಿ ದಾಳಿಗೆ ಬಾಲಕನೊಬ್ಬ ಗಾಯಗೊಂಡಿದ್ದು, ಕೂಡಲೇ ಆತನಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

ಶ್ರೀ ಜಗದ್ಗುರು ರೇಣುಚಾರ್ಯ ನಗರದ ಮಂಥನ ನಾಗರಾಜ್ ಟಿಕಾರೆ(7) ಗಾಯಗೊಂಡ ಬಾಲಕ. ಸ್ಥಳೀಯ ಕೆಪಿಎಸ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ತೆರಳಲು ಸಿದ್ಧನಾಗಿ ಮನೆಯ ಬಾಗಿಲಿನ ಮುಂದೆ ನಿಂತಿದ್ದ 7 ವರ್ಷದ ಬಾಲಕನ ಮೇಲೆ ಬೀದಿನಾಯಿಯೊಂದು ಏಕಾಏಕಿ ದಾಳಿ ಮಾಡಿದೆ. ಬಾಲಕನ ಎದೆಯ ಬಲಭಾಗಕ್ಕೆ ಕಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಕುಟುಂಬಸ್ಥರು ತಕ್ಷಣ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಸ್ಥಳಾಂತರಿಸಲಾಗಿದೆ.

ನಾಯಿ ದಾಳಿಯಿಂದ ಆತಂಕಗೊಂಡ ಸ್ಥಳೀಯರು ಬೀದಿನಾಯಿಗಳ ಉಪಟಳದ ಕುರಿತು ಪುರಸಭೆಗೆ ಹಲವಾರು ಬಾರಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಈ ಬಗ್ಗೆ ಪುರಸಭೆಯವರು ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ