ದಾಂಡೇಲಿ: ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಎನ್ನುವುದು ಮನರಂಜನೆ ದೃಷ್ಟಿಯಿಂದ ರಚನೆ ಆಗುತ್ತಿರುವುದು ಖೇದಕರ ಸಂಗತಿಯಾಗಿದೆ. ಕನ್ನಡದ ಇತಿಹಾಸ ಗೊತ್ತಿಲ್ಲದೆ ಕನ್ನಡದ ಬಗ್ಗೆ ಕೀಳಾಗಿ ಮಾತಾಡಿದರೆ ಕನ್ನಡ ಮೌಲ್ಯ ಕಡಿಮೆ ಆಗುವುದಿಲ್ಲ ಎಂದು ನಗರದ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ ಹೇಳಿದರು.
ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆ ಹೊಸೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯದ ಕಾರ್ಯಕ್ರಮಕ್ಕೆ ಅನುದಾನದ ಕೊರತೆಯಿದ್ದರೂ ಸಹೃದಯಿಗಳ ಸಹಾಯದಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಹಾಗೂ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿ, ಹಳ್ಳಿಯ ಹೊಲ್ದಾಗ ಕೃತಿಯ ಚುಟುಕುಗಳನ್ನು ವಾಚಿಸಿದರು.
ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಸಾಹಿತ್ಯ ಪರಿಷತ್ತಿನಿಂದ ನಡೆಯಲಿರುವ ಕಾರ್ಯಕ್ರಮ ಬಗ್ಗೆ ತಿಳಿಸಿದರು.ಅಜೀವ ಸದಸ್ಯ ಸುಭಾಷ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಗೋವಿಂದ ಮೇಲಗೇರಿ ಇದ್ದರು. ಕಸಾಪ ಸದಸ್ಯ ಪ್ರವೀಣ ನಾಯಕ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಉಜ್ವಲ ಸದಲಗಿ ಪ್ರಾರ್ಥಿಸಿದರು. ಶಿಕ್ಷಕಿ ಆಶಾ ದೇಶಭಂಡಾರಿ ಅತಿಥಿಗಳನ್ನು ಪರಿಚಯಿಸಿದರು.