ಕುಕನೂರು: ಹತ್ತಿ ಬೀಜೋತ್ಪಾದನೆಗೆಂದು ಕಳೆದ ಎರಡು ತಿಂಗಳ ಹಿಂದೆ ನಾಟಿ ಮಾಡಿ ಬೆಳೆಸಿದ್ದ ಹತ್ತಿ ಬೆಳೆಯನ್ನು ರೈತರು ಹರಗುತ್ತಿದ್ದಾರೆ.
ತಾಲೂಕಿನ ಬಳಗೇರಿ ಗ್ರಾಮದಲ್ಲಿ ಕೆಲವು ರೈತರು ಹತ್ತಿ ಬೀಜೋತ್ಪಾದನೆಗೆಂದು ನಾನಾ ಕಂಪನಿಗಳ ಏಜೆಂಟರ್ ಮೂಲಕ ಬೀಜ ಪಡೆದು ನಾಟಿ ಮಾಡಿದ್ದರು. ಒಂದು ಸೀಡ್ಸ್ ಪ್ಲಾಟ್ ಸುಮಾರು ಅರ್ಧ ಎಕರೆಗೂ ಹೆಚ್ಚು ಇರುತ್ತದೆ. ಹೀಗೆ ಒಬ್ಬಬ್ಬ ರೈತರು ಸುಮಾರು ನಾಲ್ಕೈದು ಹತ್ತಿ ಪ್ಲಾಟ್ ಮಾಡಿದ್ದರು. ಆದರೆ ಏಕಾಏಕಿ ಸೀಡ್ಸ್ ಕಂಪನಿಯವರು ಸೀಡ್ಸ್ ಆದ ಹತ್ತಿ ಬೀಜ ಕೇವಲ ಎರಡು ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ರೈತರಿಗೆ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ರೈತರು ಬೆಳೆದ ಬೆಳೆ ಹರಗುತ್ತಿದ್ದಾರೆ.ಬೀಜ ಕೊಡುವಾಗ ಖರೀದಿ ಎಷ್ಟು ಎಂದು ತಿಳಿಸಿರಲಿಲ್ಲ. ಹತ್ತಿ ಕ್ರಾಸಿಂಗ್ ಆರಂಭ ಮಾಡುವ ವೇಳೆ ಈ ಷರತ್ತು ಕಂಪನಿಯವರು ತಿಳಿಸಿದ್ದಾರೆ. ಇದುವರೆಗೆ ಹತ್ತಿ ಬೆಳೆಸಲು ಸಾವಿರಾರು ಖರ್ಚಾಗಿದೆ, ಎರಡು ತಿಂಗಳ ಶ್ರಮ ಪಟ್ಟಿದ್ದೇವೆ ಎಂದು ರೈತರು ಹೇಳುತ್ತಾರೆ.
ಖರೀದಿಗೆ ಷರತ್ತು:ಕ್ರಾಸ್ ಆದ ಹತ್ತಿ ಕಾಳಿನ ಇಳುವರಿಗೆ ಒಂದು ಪ್ಲಾಟಿಗೆ 3ರಿಂದ 4 ಕ್ವಿಂಟಲ್ ಬರುತ್ತದೆ. ಬರೀ ಎರಡೇ ಕ್ವಿಂಟಲ್ ಖರೀದಿ ಮಾಡುವುದರಿಂದ ಉಳಿದ ಬೀಜ ರೈತರು ಬಳಕೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ಕ್ವಿಂಟಲ್ ಕಾಳಿಗೆ ₹ 44,000ದಂತೆ ಖರೀದಿ ಮಾಡುತ್ತಾರೆ. ಒಂದು ಪ್ಲಾಟಿಗೆ ಸುಮಾರು ಐವತ್ತು ಸಾವಿರ ಖರ್ಚಾಗುತ್ತದೆ. ಎರಡೇ ಕ್ವಿಂಟಲ್ ಖರೀದಿಯಿಂದ ರೈತ ವರ್ಗಕ್ಕೆ ಲಾಭವಿಲ್ಲವೆಂದು ರೈತರು ಹರಗಲು ಮುಂದಾಗಿದ್ದಾರೆ.ಪರಿಹಾರಕ್ಕೆ ಆಗ್ರಹ:ಎರಡು ತಿಂಗಳು ಬೆಳೆಸಿದ ಬೆಳೆ ರೈತ ಹರಗುತ್ತಿದ್ದಾರೆ. ಇದರಿಂದ ಎರಡು ತಿಂಗಳು ಪಟ್ಟ ಶ್ರಮ ವ್ಯರ್ಥವಾಗಿದೆ. ಸೀಡ್ಸ್ ಕಂಪನಿ ನಂಬಿ ರೈತರು ಸಹ ಕೈ ಸುಟ್ಟುಕೊಂಡಿದ್ದಾರೆ. ಇದರಿಂದ ಹತ್ತಿ ಸೀಡ್ಸ್ ಮಾಡಿ ಹರಗಿದ ರೈತರಿಗೆ ಪರಿಹಾರ ಕಂಪನಿಯವರು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹತ್ತಿ ಬೀಜ ಕೊಡುವಾಗ ಖರೀದಿ ಇಷ್ಟೇ ಮಾಡುತ್ತೇವೆ ಎಂದು ಕಂಪನಿಯವರು ತಿಳಿಸಿರಲಿಲ್ಲ. ಆದರೆ ಈಗ ಬೆಳೆಸಿದ ಮೇಲೆ ಬರೀ 2 ಕ್ವಿಂಟಲ್ ಖರೀದಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದರಿಂದ ಲಾಭವಿಲ್ಲದ ಕಾರಣ ಹತ್ತಿ ಬೆಳೆ ಹರಗುತ್ತಿದ್ದೇವೆ ಎಂದು ಬಳಗೇರಿ ಗ್ರಾಮದ ರೈತ ಮಂಜುನಾಥ ಬೂದಗುಂಪಿ ಹೇಳಿದ್ದಾರೆ.ರೈತರು ಬೆಳೆದ ಎಲ್ಲ ಬೀಜಗಳನ್ನು ಕಂಪನಿಯವರು ಖರೀದಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕಂಪನಿಯವರು ಸಹ ಖರೀದಿ ಮಾಡುತ್ತೇವೆ ಎಂದಿದ್ದಾರೆ. ರೈತರು ಆತುರದಲ್ಲಿ ಹರಗುವ ನಿರ್ಧಾರ ಮಾಡಬಾರದು. ಕೃಷಿ ಇಲಾಖೆ ಸಹ ಕಂಪನಿಯವರ ಜತೆ ಮಾತನಾಡುತ್ತೇವೆ. ಈ ಬಗ್ಗೆ ಬಳಗೇರಿ, ಕಕ್ಕಿಹಳ್ಳಿ ಹಾಗೂ ನಾನಾ ಗ್ರಾಮಕ್ಕೆ ತೆರಳಿ ರೈತರಿಗೆ ಸೂಚನೆ ನೀಡಿದ್ದೇವೆ ಎಂದು ಕುಕನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ತೇರಿನ ತಿಳಿಸಿದ್ದಾರೆ.