ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ಗುರುವಾರ ಲಿಂ. ಶ್ರೀ ಗುರುಸಿದ್ಧಲಿಂಗ ಮಹಾಂತರ 24ನೇ ಸಂಸ್ಮರಣೋತ್ಸವ ನಿಮಿತ್ತ ರೈತ, ಸೈನಿಕ, ಮಠಾಧೀಶರ ತುಲಾಭಾರ ಕಾರ್ಯಕ್ರಮ ನಡೆಯಿತು.
ಎಮ್ಮಿಗನೂರಿನ ಹಂಪಿಸಾವಿರ ಮಠದ ವಾಮದೇವ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಅನ್ನ ಕೊಡುವ ರೈತ, ದೇಶ ರಕ್ಷಿಸುವ ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಬ್ಬರೂ ಇವರನ್ನು ಗುರುಸ್ಥಾನದಲ್ಲಿ ಗೌರವಿಸುವ ಸಂಪ್ರದಾಯ ಬೆಳೆಸಿಕೊಂಡರೆ ದೇಶ ಸುಭಿಕ್ಷವಾಗಲು ಸಾಧ್ಯ. ರೈತರನ್ನು ಪೂಜ್ಯ ಭಾವನೆಯಿಂದ ಕಾಣುವ ಜತೆಗೆ ಸೂಕ್ತ ಸ್ಥಾನಮಾನ, ಗೌರವ ಸಲ್ಲಿಸಬೇಕಿದೆ. ಬೆಳ್ಳಿ, ಬಂಗಾರದ ತಟ್ಟೆಗಳಿದ್ದರೂ ಉಣ್ಣಲು ರೈತ ಬೆಳೆದ ಅನ್ನ ಬೇಕಿರುವುದರಿಂದ ರೈತ, ಸೈನಿಕರಿಗೆ ಸೂಕ್ತ ಗೌರವ ಸಲ್ಲಿಸಬೇಕಿದ್ದು, ಈ ದಿಸೆಯಲ್ಲಿ ಮಠದಿಂದ ತುಲಾಭಾರ ಸೇವೆ ಸಲ್ಲಿಸಿದೆ ಎಂದರು.ಇದಕ್ಕೂ ಮುನ್ನಾ ಇಬ್ಬರು ಜಂಗಮವಟುಗಳಿಗೆ ಆಯ್ಯಾಚಾರ ದೀಕ್ಷೆ ನೀಡಲಾಯಿತು. ಶಿವಶಕ್ತಿ ಅಕ್ಕನ ಬಳಗಕ್ಕೆ ಚಾಲನೆ ನೀಡಲಾಯಿತು.
ಕೃಷಿ ಸೇವೆಗಾಗಿ ಶಾಲಿಗನೂರಿನ ರೈತ ಶ್ರೀನಿವಾಸ ತಿಪ್ಪಣ್ಣ ವಡ್ಡರ, ದೇಶಸೇವೆಗಾಗಿ ಮಾಜಿ ಯೋಧ ಎಮ್ಮಿಗನೂರಿನ ಶೇಖ್‌ಸಾಬ್, ಈಶಸೇವೆಗಾಗಿ ಚೌಡಯ್ಯದಾನಪುರದ ಚಿತ್ರಶೇಖರ ಶಿವಾಚಾರ್ಯರು, ಬೆಂಗಳೂರಿನ ವಿಮಲ ರೇಣುಕ ವೀರಮುಕ್ತಿ ಶಿವಾಚಾರ್ಯರು, ಉರುವಕೊಂಡದ ಡಾ. ಕರಿಬಸವರಾಜೇಂದ್ರ ಮಹಾಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಮಠದಿಂದ, ವಾಮದೇವಶಿವಾಚಾರ್ಯರಿಗೆ ಸದ್ಭಕ್ತರು ತುಲಾಭಾರ ಗೌರವ ಸಲ್ಲಿಸಿದರು.ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಗಾಲಿ ಸೋಮಶೇಖರ ರೆಡ್ಡಿ, ಪ್ರಮುಖರಾದ ಹರ್ಲಾಪುರದ ಮಲ್ಲಿಕಾರ್ಜುನ, ಮಸೀದಿಪುರದ ಚಂದ್ರಶೇಖರಗೌಡ, ಎಸ್. ಮಲ್ಲನಗೌಡ, ರಾಜಶೇಖರಗೌಡ, ಬಿ. ಸದಾಶಿವಪ್ಪ ಇದ್ದರು.
ದೇಶಕ್ಕಾಗಿ ಪ್ರಾಣತ್ಯಾಗಕ್ಕೆ ಸೈನಿಕರು ಸದಾ ಸಿದ್ಧ:ದೇಶದ ರಕ್ಷಣೆಗೆ ಸೈನಿಕರು ಪ್ರಾಣತ್ಯಾಗಕ್ಕೆ ಸದಾ ಸಿದ್ಧರಿರುತ್ತಾರೆ. ವೈಯಕ್ತಿಕವಾಗಿ ನಾಲ್ಕೈದು ಬಾರಿ ಸಾವಿನ ಅಪಾಯದಿಂದ ಪಾರಾಗಿದ್ದೇನೆ ಎಂದು ಮಾಜಿ ಯೋಧ ಕಮಾಂಡೆಂಟ್ ಶೇಖಸಾಬ್ ಹೇಳಿದರು.
ಕುರುಗೋಡು ಸಮೀಪದ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದಲ್ಲಿ ನಡೆದ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಲಾಭಾರ ಸ್ವೀಕರಿಸಿ ಎಮ್ಮಿಗನೂರು ಮಾಜಿ ಯೋಧ ಕಮಾಂಡೇಡ್ ಶೇಖಸಾಬ್ ಅವರು ಮಾತನಾಡಿದರು. ದೇಶರಕ್ಷಣೆಗಾಗಿ ಅನುಭವಿಸಿದ ನೋವು ನನಗೆ ತೃಪ್ತಿ ತಂದಿದೆ. ನಾನು ಪೆನ್ನು ಹಿಡಿದು ಕಚೇರಿಯಲ್ಲಿ ಕೆಲಸ ಮಾಡಿಲ್ಲ. ಬದಲಿಗೆ ಗನ್ನು ಹಿಡಿದು ಪಾಕಿಸ್ತಾನದ ಗಾಡಿಯಲ್ಲಿ ಕೆಲಸ ಮಾಡಿದ್ದೇನೆ ಎಂದರು.ಕುರುಗೋಡು ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ತುಲಾಭಾರ ಸ್ವೀಕರಿಸಿ ಮಾಜಿ ಯೋಧ ಕಮಾಂಡೆಂಟ್ ಶೇಖಸಾಬ್ ಅವರು ಮಾತನಾಡಿದರು.