ಹೊಸಪೇಟೆ: ಜನಸಂಖ್ಯೆ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗದರ್ಶನ ಪಾಲಿಸಬೇಕು. ಚಿಕ್ಕ ಕುಟುಂಬ, ಸುಖಿ ಕುಟುಂಬ ಎಂಬುದನ್ನು ಅರಿತುಕೊಂಡು ಜನಸಂಖ್ಯೆ ನಿಯಂತ್ರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2025ರ ವಿಶ್ವ ಜನಸಂಖ್ಯೆ ಅಂದಾಜು 8.23 ಶತಕೋಟಿ ಇದೆ. ವಿಶ್ವಸಂಸ್ಥೆ 1987ರಲ್ಲಿ ಜನಸಂಖ್ಯೆ ದಿನ ಆಚರಣೆ ಮಾಡಲು ಮುನ್ನುಡಿ ಬರೆಯಿತು. ವಿಜಯನಗರ ಜಿಲ್ಲೆ ಜನ ಸಂಖ್ಯೆ 2025ರ ಅಂದಾಜು 24.48 ಲಕ್ಷ ಇದೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ವೈದ್ಯರ ಸಲಹೆ ಪಡೆಯಬೇಕು. ಸರ್ಕಾರದ ಮಾರ್ಗದರ್ಶನವನ್ನು ನಾವೆಲ್ಲರೂ ಪರಿಪಾಲಿಸಬೇಕು ಎಂದರು.ಆರ್‌ಸಿಎಚ್‌ಒ ಡಾ. ಬಿ. ಜಂಬಯ್ಯ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕಾಗಿ ಮೊದಲು ಪತಿ, ಪತ್ನಿ ಸಿದ್ಧರಾಗಬೇಕು. ಆರತಿಗೊಂದು, ಕೀರ್ತಿಗೊಂದು ಮಗು ಬೇಕು ಎಂಬ ಘೋಷವಾಕ್ಯ ಇದೆ. ಈಗ ಹೆಣ್ಣಾಗಲಿ, ಗಂಡಾಗಲಿ ಒಂದೇ ಮಗು ಸಾಕು ಎಂಬ ಘೋಷವಾಕ್ಯವನ್ನು ನಾವೆಲ್ಲರೂ ಮೊಳಗಿಸಬೇಕಿದೆ. ಆಧುನಿಕ ಯುಗದಲ್ಲಿ ನಾವು ಮೊದಲು ನಾವೆಲ್ಲರೂ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸಬೇಕಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಅತಿ ಮುಖ್ಯ ಎಂದರು.
ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ರಾಧಿಕಾ ಮಾತನಾಡಿ, ಅಂತರದ ಹೆರಿಗೆ ಇಲ್ಲದೆ ಹೋದರೆ ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತಮ ಆರೋಗ್ಯದ ಕಡೆಗೆ ಎಲ್ಲರೂ ದೃಷ್ಟಿಹರಿಸಬೇಕು ಎಂದರು.ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಧರ್ಮನಗೌಡ, ಸಹದೇವ ಕಾರ್ಯಕ್ರಮ ನಿರ್ವಹಿಸಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ನೂರ್ ಬಾಷಾ, ಶುಶ್ರೂಣಾಧಿಕಾರಿ ವೀಣಾ, ಸಾರ್ವಜನಿಕರು ಹಾಗೂ ಸಿಬ್ಬಂದಿ ಇದ್ದರು.