ಕನ್ನಡಪ್ರಭ ವಾರ್ತೆ ಮೈಸೂರು
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಭಕ್ತರು ಹರಿದು ಬಂದರು.ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 7 ಗಂಟೆಯಾದರೂ ಮಂಜನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಧಾವಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದರ್ಶನ ಪಡೆದು ಧನ್ಯರಾದರು.
ಕೆಲವರು ಮೆಟ್ಟಿಲುಗಳ ಮೂಲಕ ಬಂದರೆ, ಇನ್ನೂ ಹಲವರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಬೆಟ್ಟಕ್ಕೆ ಆಗಮಿಸಿದ್ದರು. ಉಚಿತ ಪ್ರವೇಶ, 300 ರೂ, 2000 ರೂ. ಸರತಿ ಸಾಲಿನಲ್ಲಿ ನಿಂತು ಸಾವದಾನವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.ಚಾಮುಂಡಿಬೆಟ್ಟಕ್ಕೆ ಉಚಿತ ಬಸ್ ಗಳಲ್ಲಿ ಮಾತ್ರವಲ್ಲ, ಮೆಟ್ಟಿಲು ಮಾರ್ಗವಾಗಿ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು. ಯುವತಿಯರು, ಗೃಹಿಣಿಯರು 1001 ಮೆಟ್ಟಿಲುಗಳಿಗೂ ಕುಂಕುಮ, ಅರಿಶಿಣ ಹಚ್ಚುತ್ತ ಮೆಟ್ಟಿಲು ಹತ್ತಿದರು. ಕೆಲವರು ಮಂಡಿಯಲ್ಲೇ ಮೆಟ್ಟಿಲುಗಳನ್ನು ಹತ್ತುವ ದೃಶ್ಯ ಸಹ ಕಂಡು ಬಂತು.
ಮುಂಜಾನೆಯಿಂದಲೇ ವಿವಿಧ ಪೂಜೆಮುಂಜಾನೆ 3 ಗಂಟೆಯಿಂದಲೇ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ 5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30 ರಿಂದ 7 ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರಿಗೆ ಉಪ್ಪಿಟ್ಟು, ಕೇಸರಿಬಾತ್, ಬಾತ್ ಅನ್ನು ಪ್ರಸಾದವಾಗಿ ವಿತರಿಸಲಾಯಿತು.ವಿಶೇಷ ಗಜಲಕ್ಷ್ಮೀ ಅಲಂಕಾರ
ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿ ಬಿಳಿ, ನೇರಳೆ ಬಣ್ಣದ ಸೀರೆಯುಟ್ಟು ವಿಶೇಷ ಗಜಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ದೇವಾಲಯದ ಇಡೀ ಆವರಣ ವಿಶೇಷ ಹೂವಿನ ಅಲಂಕಾರದಿಂದ ಆಕರ್ಷಕವಾಗಿತ್ತು.ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು.
ವಿವಿಧೆಡೆ ಪ್ರಸಾದ ವಿತರಣೆ3ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಹಲವೆಡೆ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ಅಗ್ರಹಾರ, ಚಾಮುಂಡಿಪುರಂ, ಕುವೆಂಪುನಗರ, ಒಂಟಿಕೊಪ್ಪಲು, ರಾಮಸ್ವಾಮಿ ವೃತ್ತ, ಶಾಂತಲಾ ಸಿಗ್ನಲ್, ಮುಡಾ ವೃತ್ತ, ಆರ್ ಟಿಒ ವೃತ್ತ ಸೇರಿದಂತೆ ಹಲವೆಡೆ ಪ್ರಸಾದ ವಿತರಿಸಲಾಯಿತು.
----ಬಾಕ್ಸ್...
ಗಣ್ಯರಿಂದ ಚಾಮುಂಡೇಶ್ವರಿ ದರ್ಶನಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಹಲವು ಗಣ್ಯರು ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಬಿ.ವೈ. ರಾಘವೇಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಎ. ಮಂಜು, ಕೊತ್ತೂರು ಮಂಜುನಾಥ್, ಬಾಲಕೃಷ್ಣ, ಶರವಣ, ನಟರಾದ ಶಶಿಕುಮಾರ್, ವಶಿಷ್ಟ ಸಿಂಹ, ನಟಿ ಕಾರುಣ್ಯ ಸೇರಿದಂತೆ ಹಲವರು ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
----ಬಾಕ್ಸ್...
ವಿಐಪಿಗಳ ಸಂಖ್ಯೆ ಹೆಚ್ಚಳ- ಗೊಂದಲಚಾಮುಂಡಿಬೆಟ್ಟದಲ್ಲಿ ವಿಐಪಿಗಳ ಹಾವಳಿ ಹೆಚ್ಚಾಗಿತ್ತು. ನಾವು ಸಚಿವರು, ಶಾಸಕರ ಕಡೆಯವರೆಂದು ಶಿಫಾರಸು ಪತ್ರ ತಂದವರೇ ಹೆಚ್ಚಾಗಿದ್ದರು. ಇದರಿಂದ ವಿಐಪಿಗಳ ಸರತಿ ಸಾಲು ಮಾರುದ್ದ ಇತ್ತು. ದೇವಾಲಯದ ಗರ್ಭಗುಡಿಗೆ ತೆರಳಲೂ ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಧರ್ಮ ದರ್ಶನಕ್ಕೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಬಂದಿದ್ದವರಿಗೆ ಸಮಸ್ಯೆಯಾಯಿತು. ಭಕ್ತರೊಂದಿಗೆ ವಿಐಪಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಅಲ್ಲದೆ, ಮೊದಲ ಆಷಾಢ ಶುಕ್ರವಾರದಂತೆ 3ನೇ ಆಷಾಢ ಶುಕ್ರವಾರವೂ ಚಾಮುಂಡಿಬೆಟ್ಟದಲ್ಲಿ ಗೊಂದಲದ ಗೂಡಾಗಿತ್ತು.ವಿಐಪಿಗಳು ತೆರಳುವ ಸಾಲಿನಲ್ಲೇ ಬಾರೀ ನೂಕು ನುಗ್ಗಲು ಸಹ ಉಂಟಾಯಿತು.
ಜನಜಂಗುಳಿ ನಡುವೆ ಸಿಲುಕಿದ ನಟ ವಸಿಷ್ಠ ಸಿಂಹ, ಕುಟುಂಬ ಸಮೇತ ಬಂದಿದ್ದ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಕೂಡ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂಕುನುಗ್ಗಲು ಕಡಿಮೆಯಾದ ಬಳಿಕ ದೇಗುಲಕ್ಕೆ ತೆರಳಿದರು.-----
ಬಾಕ್ಸ್...ಅವ್ಯವಸ್ಥೆ- ಡಿಸಿ, ಪೊಲೀಸ್ ಆಯುಕ್ತರ ಭೇಟಿ
ಚಾಮುಂಡಿಬೆಟ್ಟದಲ್ಲಿ ಅವ್ಯವಸ್ಥೆ ಉಂಟಾದ ವಿಚಾರ ತಿಳಿದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೋಲಿಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.ಈ ಶುಕ್ರವಾರ ಮಧ್ಯಾಹ್ನದವರೆಗೇ ಸುಮಾರು 2 ಲಕ್ಷದಷ್ಟು ಜನರು ಬಂದಿದ್ದಾರೆ. ಸಾಕಷ್ಟು ಜನ ದಟ್ಟಣೆಯಿಂದ ಒಂದಷ್ಟು ವ್ಯತ್ಯಾಸಗಳಾಗಿವೆ. ಸರದಿ ಸಾಲಿನಲ್ಲಿ ಬರುವ ಜನರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಈಗ ಎಲ್ಲವನ್ನೂ ಸರಿ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಕಾರ್ಯದರ್ಶಿಗೆ ತರಾಟೆಇದೇ ವೇಳೆ ಚಾಮುಂಡೇಶ್ವರಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರನ್ನು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಏನಿದು ವ್ಯವಸ್ಥೆ? 2 ಸಾವಿರ ರೂಪಾಯಿನವರಿಗೆ ಯಾಕೆ ಬಿಡುತ್ತಿಲ್ಲ? ಕೀ ಯಾಕೆ ಹಾಕ್ಸಿದ್ದೀರಾ? ಹೀಗೇ ಆದರೆ ನಾನು ನಮ್ಮವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು.