ಕನ್ನಡಪ್ರಭ ವಾರ್ತೆ ಹಳೇಬೀಡು
ಹಿಂದಿನ ಮಹಾರಾಜರ ಕಾಲದಿಂದಲೂ ಇಂದಿನ ರಾಜಕೀಯ ವ್ಯವಸ್ಥೆಯವರೆಗೆ ಗುರು ಪರಂಪರೆಯು ನಡೆದುಕೊಂಡು ಬರುತ್ತಲೇ ಇದೆ. ಇದು ಸನಾತನ ಧರ್ಮದ ಪದ್ಧತಿ ಎಂದು ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನಮಠದ ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.ಹಳೇಬೀಡು ಸಮೀಪದ ಪುಷ್ಪಗಿರಿ ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುಗಳಿಗೆ ಪುಷ್ಪಧಾರಣೆ, ರಜತ ಕಿರೀಟ ಧಾರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ, ಗುರುಪೂರ್ಣಿಮೆಯಲ್ಲಿ ಗುರುವನ್ನು ಮನದಾಳದಲ್ಲಿ ನಮಸ್ಕರಿಸುವುದೇ ವಿಶೇಷವಾಗಿದ್ದು, ಮಹಾಭಾರತ, ರಾಮಾಯಣ ಕಾಲದಿಂದಲೂ ಗುರುಗಳಿಗೆ ವಿಶೇಷ ಸ್ಥಾನಮಾನ ಹೊಂದಿದ್ದ ದೇಶ ನಮ್ಮದು. ಇವತ್ತು ನಮ್ಮ ದೇಶದಲ್ಲಿ ಮಠಮಾನ್ಯಗಳು ಇಲ್ಲದಿದ್ದರೆ ಹಿಂದೂ ಸಂಸ್ಕೃತಿ ನಾಶವಾಗುತ್ತಿತ್ತು, ಮನುಷ್ಯನಿಗೆ ಗುರಿ ತಲುಪಲು ಗುರು ಹಿಂದೆ ಇದ್ದೇ ಇರುತ್ತಾರೆ. ದ್ರೋಣಾಚಾರ್ಯ, ವಿಶ್ವಾಮಿತ್ರ ಋಷಿಗಳ ಗುರು ಪರಂಪರೆ ಪದ್ಧತಿ ಹಾಗೂ ಮಹಾರಾಜರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಹಿಂದೆ ವಿದ್ಯಾರಣ್ಯ ಗುರುಗಳು, ಚಂದ್ರಗುಪ್ತ ಮೌರ್ಯನ ಹಿಂದಿದ್ದ ಚಾಣಕ್ಯ ಹೀಗೆ ಗುರು ಪರಂಪರೆ ಪದ್ಧತಿ ಮುಂದುವರೆಯುತ್ತದೆ ಎಂದು ತಿಳಿಸಿದರು.
ಪುಷ್ಪಗಿರಿ ಮಹಾಸಂಸ್ಥಾನಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಮಾತನಾಡುತ್ತಾ, ಅತಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಪರಮ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ಈ ಗುರುಪೂರ್ಣಿಮೆ ದಿನವೇ ಪೀಠ ಅಲಂಕರಿಸಿದ್ದರು, ಈ ಮಠದ ವತಿಯಿಂದ ಐದು ವರ್ಷಗಳಿಂದಲೂ ಗುರುಪೂರ್ಣಿಮೆಯನ್ನು ಸತತವಾಗಿ ನಡೆಸಿಕೊಂಡು ಬಂದಿದ್ದೇವೆ. ಈ ಮಠಕ್ಕೆ ಸುದೀರ್ಘ ಇತಿಹಾಸವಿದೆ. ಇಂದು ಶ್ರೀ ಸೋಮಶೇಖರ ಶಿವಾಚಾರ್ಯರು ಈ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ನಂತರ ಕ್ರಮೇಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ೨೦೧೭ರಲ್ಲಿ ಮೊದಲ ಹಂತದ ನೀರಿನ ಹೋರಾಟದಲ್ಲಿ ರಣಘಟ್ಟ ಯೋಜನೆ ಪ್ರತಿಫಲಕ್ಕೆ ಇಲ್ಲಿಯ ರೈತರಿಗೆ ಸಂತಸ ನೀಡಿದ್ದಾರೆ. ೫.೫೦ ಕೋಟಿ ರು. ಅನುದಾನದಲ್ಲಿ ಪುಷ್ಪಗಿರಿ ಕಲಾ ಕ್ಷೇತ್ರ ಸಿದ್ಧವಾಗಿದೆ, ಮುಂದಿನ ದಿನಗಳಲ್ಲಿ ಹಾಸನದಲ್ಲಿ ೫೦೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ತೆರೆಯಲು ಸಿದ್ದವಾಗಿದೆ. 150 ಭಕ್ತರು ಆಸ್ಪತ್ರೆಗೆ ಕೊಠಡಿ ಸಹಾಯ ಮಾಡಿದ್ದಾರೆ, ಇದರ ರೂವಾರಿ ಶ್ರೀಗಳು. ಅವರಿಗೆ ಎಲ್ಲಾ ಭಕ್ತರು ಧನ್ಯವಾದ ತಿಳಿಸಲಿ ಎಂದು ಹೇಳಿದರು. ಉಪನ್ಯಾಸಕರು ಡಾ. ಮಂಜುನಾಥ್ , ಜಾನಪದ ಸಾಹಿತಿ ಡಾ. ಶಂಭು ಬಳಿಗಾರ ಅವರು ಜಾನಪದ ಮತ್ತು ಹುಬ್ಬಳ್ಳಿಯ ಭಾಷೆಯಲ್ಲಿ ಜನರ ಮನಸ್ಸನ್ನು ಗೆದ್ದರು.