ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸಾಮೂಹಿಕ ನಾಯಕತ್ವ ರೈತಸಂಘದ ನಾಯಕ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಧರಣಿ ನಡೆಸಿ ಮುಖ್ಯಮಂತ್ರಿ, ಅರಣ್ಯ ಸಚಿವ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತಸಂಘದ ಕಾರ್ಯಕರ್ತರೇ ಮಾಹಿತಿ ನೀಡಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೋಗಿ ಹೋಂ ಸ್ಟೇಗಳ ಮೇಲೆ ದಾಳಿ ನಡೆಸಿದ ವನ್ಯಜೀವಿ ಕೊಂಬು ಹಾಗೂ ಚರ್ಮ,ಗನ್ ಹಾಗೂ ಇನ್ನಿತರ ವಸ್ತುಗಳು ಪತ್ತೆ ಹಚ್ಚಲು ಸಹಕರಿಸಿದವರ ಮೇಲೆ ಬಂಡೀಪುರ ಪ್ರಭಾರ ಡಿಸಿಎಫ್ ಶುಭಂ ಸಿಂಗ್ ತನ್ವರ್ ಬೆದರಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ಬಂಡೀಪುರ ಪ್ರಭಾರ ಡಿಸಿಎಫ್ ಮೇಲೆ ರೈತರ ಮೇಲೆ ಧಮಕಿ ಹಾಕಿದ್ದಾರೆ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ರೈತಸಂಘದ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ ಗೌರಿ,ಗಣೇಶ್ ಹಬ್ಬದ ಬಳಿಕ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಇಲಾಖೆ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಂದಿನ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು,ಶಾಸಕರು ಆಗಮಿಸಬೇಕು.ಅಂದಿನ ಪ್ರತಿಭಟನೆಗೆ ರೈತರು ಪೊರಕೆ,ಬಾರ್ ಕೋಲ್ ತರಬೇಕು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಸಿಎಫ್ ಕೆ.ಸುರೇಶ್,ಆರ್‌ಎಫ್ ಸಿ ಸತೀಶ್ ಪ್ರತಿಭಟನಾಕಾರರ ಮನವಿ ಆಲಿಸಿದರು.
ಬಂಡೀಪುರ ಪ್ರಭಾರ ಡಿಸಿಎಫ್ ವಿರುದ್ದ ಸಾಮೂಹಿಕ ನಾಯಕತ್ವ ರೈತಸಂಘದ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜು ಕಿರಣ್ ಮಾತನಾಡಿ ಸಫಾರಿ ವಾಹನಗಳಿಗೆ ಜಿಪಿಎಸ್ ಹಾಕಿಲ್ಲವೇಕೆ ಎಂದು ಪ್ರಶ್ನಿಸಿದರು.
ಸಫಾರಿ ಆರಂಭವಾದರೂ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಿಲ್ಲ? ಕೆಲ ವಾಹನಗಳಿಗೆ ಎಫ್‌ಸಿ ಇಲ್ಲ,ಕೆಲ ವಾಹನಗಳಿಗೆ ವಿಮೆ ಕಟ್ಟಿಲ್ಲ ಎಂದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಯೇ ಅನುಮಾನ ಮೂಡುತ್ತದೆ ಎಂದರು.
ಪಾಲಾಕ್ಷ, ಶಶಿ, ಷಣ್ಮುಖಸ್ವಾಮಿ, ಮಹಿಳೆಯರು ಸೇರಿದಂತೆ ನೂರಾರು ಮಂದಿ ಇದ್ದರು.