ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಮುಖಂಡರು, ದೇಶದ ಬೆನ್ನೆಲುಬಾದ ರೈತರ ಪರ ಸರ್ಕಾರಗಳಿಗೆ ಯಾವುದೇ ಕಾಳಜಿ ಇಲ್ಲದಂತಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಿ ರೈತರಿಗೆ ಕೈಗೆಟುಕುವ ದರದಲ್ಲಿ ಗೊಬ್ಬರ ಒದಗಿಸಬೇಕು. ಉಳಿಮೆ, ಬಿತ್ತನೆ, ಕೊಯ್ಲು ಹಾಗೂ ಸಾಗಾಣಿಕೆಗೆ ಡೀಸೆಲ್ ಅಗತ್ಯವಾಗಿದ್ದು, ನಿರಂತರ ದರ ಏರಿಕೆಯಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ. ಆದ್ದರಿಂದ ಡೀಸೆಲ್ ಬೆಲೆಯನ್ನು ತಕ್ಷಣ ಕಡಿಮೆ ಮಾಡಬೇಕು. ಜೊತೆಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರೈತರಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಿಸಬೇಕು. ಕೆಪಿಟಿಸಿಎಲ್ ಖಾಸಗೀಕರಣ ಪ್ರಕ್ರಿಯೆ ಕೂಡಲೇ ಕೈಬಿಡಬೇಕು. ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ನ್ಯಾಯಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಸರ್ಕಾರಗಳಿಗೆ ಕಿಂಚಿತ್ತೂ ಕಾಳಜಿ ಇದ್ದರೆ ಕೂಡಲೇ ಡೀಸೆಲ್ ಹಾಗೂ ರಸಗೊಬ್ಬರದ ಬೆಲೆ ಇಳಿಸಬೇಕು. ಜೊತೆಗೆ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಟ್ಟು ರೈತ ಪರ ನಿಲವು ಹೊಂದಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಕೆ. ಅರುಣ್ ಕುಮಾರ್ ಎಚ್ಚರಿಕೆ ನೀಡಿದರು.ರಾಜಕೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ. ರೈತ ವಿರೋಧಿ ನೀತಿಗಳ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ರಸಗೊಬ್ಬರ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ರೈತರ ಮೇಲಿನ ಹೊರೆ ಹೆಚ್ಚಾಗಿದ್ದು, ಸರ್ಕಾರಗಳು ಕೂಡಲೇ ರೈತ ವಿರೋಧಿ ನೀತಿ ಕೈಬಿಡಬೇಕು ಎಂದು ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ ಆಗ್ರಹಿಸಿದರು.ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನಿಗೆ ಮನವಿ ಪತ್ರ ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಕೋಟೆ ಚನ್ನೆಗೌಡ, ಮಾರುತಿ, ರಾಮಾಂಜಿನಪ್ಪ, ರೆಡ್ಡಪ್ಪ, ಈಶ್ವರ ರೆಡ್ಡಿ, ನಾರಾಯಣಪ್ಪ, ರಮೇಶ್ ಬಾಬು, ರವಿ ಪ್ರಕಾಶ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.
ರಸಗೊಬ್ಬರ, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.