ಹಿರೇಕೆರೂರು: ಅಖಿಲ ಭಾರತ ಸಮನ್ವಯ ಶೇಂಗಾ ಸಂಶೋಧನಾ ಯೋಜನೆ ಬೀಜ ಘಟಕ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರಾಣಿಬೆನ್ನೂರು ಇವರ ಸಹಯೋಗದಲ್ಲಿ ಹಿರೇಕೆರೂರು ತಾಲೂಕ ಯಲವದಹಳ್ಳಿ ಗ್ರಾಮದ ನಾಗಪ್ಪ ಗುಡ್ಡಪ್ಪ ಜೋಗೇರ ಇವರ ಜಮೀನಿನಲ್ಲಿ ಡಿ.ಎಚ್.256 ಶೇಂಗಾ ತಳಿಯ ಕ್ಷೇತ್ರೋತ್ಸವ ಜರುಗಿತು. ಧಾರವಾಡ ಕೃಷಿವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪುಟ್ಟನಗೌಡ ಪೊಲೀಸಗೌಡ ಕಾರ್ಯಕ್ರಮ ಉದ್ಘಾಟಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇಂಗಾ ಬೆಳೆಯುವಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿದೆ. 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುತ್ತಿದ್ದಾರೆ. ತಾವು ಈ ಸಣ್ಣ ಗ್ರಾಮದಲ್ಲಿ ಈ ತಳಿಯ ಬೀಜವನ್ನು ಬೆಳೆದು ಪ್ರಾತ್ಯಕ್ಷಿತೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ. ಶೇಂಗಾದ ಜೊತೆಯಲ್ಲಿ ಸಿರಿಧಾನ್ಯಗಳಾದ ರಾಗಿ, ಹುರುಳಿ, ನವಣಿ ಮುಂತಾದವುಗಳನ್ನು ಬೆಳೆದು ಏಕ ಬೆಳೆ ಪದ್ದತಿಯನ್ನು ಕಡಿಮೆ ಮಾಡಿ ಬಹುಬೆಳೆಪದ್ಧತಿಯನ್ನು ಮಾಡಿದರೆ ರೈತ ಆರ್ಥಿಕ ಸಂಕಷ್ಟದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಇದನ್ನು ಎಲ್ಲಾ ರೈತರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಧಾರವಾಡ ಕೃಷಿ ವಿವಿ ತಳಿ ಶಾಸ್ತ್ರ ವಿಜ್ಞಾನಿ ಡಾ. ಸುಮಾ ಮೊಗಲಿ ಮಾತನಾಡಿ, ನಾವು ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಖಾಂತರ ಇಲ್ಲಿಯ ರೈತರಿಗೆ ಶೇಂಗಾ ಬೆಳೆಯುವ ಬೀಜವನ್ನು ಪೂರೈಸಿದ್ದೆವು. ಈ ಗ್ರಾಮದ ರೈತರು ತುಂಬಾ ಚೆನ್ನಾಗಿ ಶೇಂಗಾ ಬೆಳೆಯನ್ನು ಬೆಳೆದಿರುತ್ತಾರೆ. ಇದನ್ನು ಎಲ್ಲಾ ರೈತರಿಗೆ ಪರಿಚಯ ಮಾಡುವ ಉದ್ದೇಶಕ್ಕಾಗಿ ಇಂದು ಮುಂಚೂಣಿ ಪ್ರಾತ್ಯಕ್ಷಿತೆಯನ್ನು ಮಾಡುತ್ತಿದ್ದೇವೆ. ಬೆಳೆಯನ್ನು ನೋಡಿ ನಮಗ ತುಂಬಾ ಸಂತೋಷವಾಗಿದೆ. ಇವರು ಬೆಳೆದ ಶೇಂಗಾ ನಾವೇ ಖರೀದಿ ಮಾಡುತ್ತೇವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಸಂಶೋಧನಾ ನಿರ್ದೇಶಕರು ಡಾ. ಎಮ್.ಎಸ್. ಶಿರಹಟ್ಟಿ ಮಾತನಾಡಿ, ಮಣ್ಣು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿಗೆ ಕಾಳಜಿವಹಿಸಬೇಕು, ನಮ್ಮ ರೈತರು ಗೋವಿನಜೋಳ ಬೆಳೆಯನ್ನು ಮಾತ್ರ ಬೆಳೆಯುತ್ತಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಬರುವುದಿಲ್ಲ. ರೈತರು ಎಣ್ಣೆ ಕಾಳುಗಳನ್ನು ಮತ್ತು ಬೇಳೆ ಕಾಳುಗಳನ್ನು ಬೆಳೆಯಬೇಕು. ಇದರಿಂದ ನಾವು ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು. ರೈತರು ಕೃಷಿಯನ್ನು ತಾಂತ್ರ‍್ರಿಕತೆಯ ಮುಖಾಂತರ ಮಾಡಿದರೆ ಮಾತ್ರ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಪಿ.ಯು. ಕೃಷ್ಣರಾಜ ಮಾತನಾಡಿ, ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿದರೆ ಖರ್ಚನ್ನು ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಮಾರುಕಟ್ಟೆ ಸೌಲಭ್ಯ ಪಡೆದು ಬೆಳೆಗಳಿಗೆ ಒಳ್ಳೆಯ ದರ ಪಡೆದು ಕೃಷಿಯನ್ನು ಮಾಡಬೇಕು ಸಲಹೆ ನೀಡಿದರು.ಕೆವಿಕೆ ಹನುಮನಮಟ್ಟಿ ಮುಖ್ಯಸ್ಥರಾದ ಡಾ.ಎ.ಎಚ್. ಬಿರಾದಾರ ಮಾತನಾಡಿ, ರೈತರು ಕೃಷಿಯಲ್ಲಿ ಖರ್ಚನ್ನು ಹೆಚ್ಚಿಗೆ ಮಾಡಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಹಲವಾರು ವಿಧಾನಗಳನ್ನು ತಿಳಿಸಿದರು. ಸಕಾಲಕ್ಕೆ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಗುಣಮಟ್ಟದ ಬೀಜಗಳನ್ನು ಬಿತ್ತಿ ಬೆಳೆಗಳಿಗೆ ಕೀಟಗಳ ಹಾವಳಿ ಬರುವುದಕ್ಕಿಂತ ಮುಂಚಿತವಾಗಿ ಜಾಗೃತರಾಗಿ ಸಾವಯವ ಕೀಟನಾಶಕಗಳನ್ನು ಬಳಸಬೇಕು ಇದರಿಂದ ಖರ್ಚನ್ನು ಕಡಿಮೆ ಮಾಡಬಹುದು ಎಂದರು.ರಾಣಿಬೆನ್ನೂರು ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಸ್.ಡಿ. ಬಳಿಗಾರ ಮಾತನಾಡಿ, ನಮ್ಮ ಸಂಸ್ಥೆಯು ಸುತ್ತಮುತ್ತಲಿನ 3000 ರೈತರೊಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಏಕ ಬೆಳೆ ಪದ್ಧತಿಯಿಂದ ಬಹುಬೆಳೆ ಪದ್ಧತಿ ತರುವ ಉದ್ದೇಶಕ್ಕಾಗಿ ನಾವು ಮಾದರಿ ಪ್ಲಾಟ್‌ಗಳನ್ನು ರೈತರಿಗೆ ನೀಡಿ ಸಾವಯವ ಮತ್ತು ಸಮಗ್ರ ಕೃಷಿಯನ್ನು ಮಾಡಿ ರೈತರು ಆಯವನ್ನು ಹೆಚ್ಚಿಸಿಕೊಳ್ಳುವ ಜೀವನೋಪಾಯ ಸುಧಾರಣಾ ಕಾರ್ಯಕ್ರಮಗಳನ್ನು ಸಹ ಮಾಡುತ್ತಿದೆ. ಜೊತೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ನೀಡಿದ ಶೇಂಗಾ ಬೀಜಗಳ ಪ್ಲಾಟುಗಳನ್ನು ಕೊಟ್ಟು ರೈತರು ಚೆನ್ನಾಗಿ ಬೆಳೆಸಿದ್ದಾರೆ. ಆದ್ದರಿಂದ ಇಂದು ಪ್ರಾತ್ಯಕ್ಷಿತೆಯನ್ನು ನಾವೆಲ್ಲರೂ ಕೂಡಿ ಶೇಂಗಾ ಬೆಳೆಯ ತಳಿಯ ಪರಿಚಯವನ್ನು ಎಲ್ಲಾ ರೈತರಿಗೂ ಮಾಡುತ್ತಿದ್ದೇವೆ ಎಂದು ಹೇಳಿದರು.ಡಾ. ಮಮತಾಶ್ರೀ ಸಿ.ಎಮ್. ಡಾ. ಶಶಿಧರ್ ಇದ್ದರು. ಜಿ.ಪಿ. ನದಾಫ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಮ್ಮ ಸ್ವಾಗತಿಸಿದರು. ನವೀನ ಛತ್ರದಮಠ್ ವಂದಿಸಿದರು.