ಬಿಂದುಮಾಧವ ಮಣ್ಣೂರ
ಮಣ್ಣೂರ, ಶೇಷಗಿರಿ, ಹೊಸೂರ, ಶಿವಬಾಳನಗರ, ಉಪ್ಪಾರವಾಡಿ, ರಾಮನಗರ, ಕುಡಗನೂರ, ಶಿವೂರ, ಕರಜಗಿ, ಮಾಶಾಳ, ಉಡಚಣ, ಉಡಚಣಹಟ್ಟಿ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಒಣ ಬೇಸಾಯ ಭೂಮಿಯಲ್ಲಿ ಬಿತ್ತನೆ ಮಾಡಿರುವ ಕಡ್ಲಿ ಬೆಳೆ ಈಗ ಹುಲುಸಾಗಿ ಬೆಳೆದು ಬಂಪರ್ ಫಸಲು ಬರುವ ನಿರೀಕ್ಷೆಯಲ್ಲಿದೆ.
ಕೀಟ ಬಾಧೆ ತಪ್ಪಿಸಲು ಹಗಲು ರಾತ್ರಿ ಎನ್ನದೇ ಕ್ರಿಮಿನಾಶಕ ಸಿಂಪರಣೆ ಮಾಡಿರುವ ನೇಗಿಲಯೋಗಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಮಳೆ ಆಶ್ರಿತ ಯರಿ ಭೂಮಿಯಲ್ಲಿ ರೈತರು ಅಣ್ಣಿಗೇರಿ ತಳಿಯ ಕಡಲೆ ಬೀಜ ಬಿತ್ತಿದ್ದಾರೆ. ಬೆಳೆ ಈಗ ಭೂತಾಯಿಗೆ ಹಸಿರು ಸೀರೆ ಉಡಿಸಿದಂತೆ ಲವಲವಿಕೆಯಿಂದ ನಳನಳಿಸುತ್ತಿದೆ. ಉತ್ತಮ ಹವಾಮಾನ ಜತೆಗೆ ಉತ್ತಮ ತೇವಾಂಶ ಇದೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ರೈತ ಸಮೂಹ ಕ್ರಿಮಿನಾಶಕ ಸಿಂಪಡಿಸಿ ಹತೋಟಿಗೆ ತಂದಿದ್ದಾರೆ.
ಮಳೆಯಾಶ್ರಿತ ಕಪ್ಪು ಮಣ್ಣಿನ ಯರಿಭೂಮಿಯಲ್ಲಿ ಬೆಳೆದ ಅಣ್ಣಿಗೇರಿ ತಳಿಯ ಕಡಲೆ ಕಾಳುಗಳಿಗೆ ಭಾರಿ ಬೇಡಿಕೆ. ಕೃಷಿ ಮಾರುಕಟ್ಟೆ ವಹಿವಾಟು ಮೇಲೆ ಭಾಗಶಃ ಅವಲಂಬಿತ ಈ ಕಡಲೆ ಬೆಳೆಗೆ ಕ್ರಿಮಿಕೀಟ ಬರುವುದು ಸಾಮಾನ್ಯ.ಕಡಲೆ ಬೆಳೆಯ ಕೀಡೆಗಳನ್ನು ಕ್ರಿಮಿನಾಶಕ ಔಷಧಿಗಳ ಸಿಂಪರಣೆ ಮೂಲಕ ನಿಯಂತ್ರಿಸುವುದು ಅಸಾಧ್ಯ. ಆದರೆ, ಕೃಷಿ ತಜ್ಞರ ಸೂಕ್ತ ಮಾರ್ಗದರ್ಶನ ಪಡೆದು ಸಿಂಪರಣೆ ಮಾಡಿದ ಪ್ರಯುಕ್ತ ಬೆಳೆ ಉತ್ತಮವಾಗಿದೆ ಎಂದು ರೈತರು ತಿಳಿಸಿದರು.
ಬೆಳೆಗೆ ಪೂರಕ ಚಳಿ: ಮುಂಗಾರು ಹಂಗಾಮಿನಲ್ಲಿ ಮಳೆ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ತೊಗರಿ ಹತ್ತಿ ಸೂರ್ಯಕಾಂತಿ ಮೆಕ್ಕೆಜೋಳ ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಕಡಲೆ ಜೋಳ ಕುಸುಬೆ ಗೋದಿ ಬೆಳೆಗಳು ಚೆನ್ನಾಗಿವೆ. ಅನ್ನದಾತನಿಗೆ ಹಿಂಗಾರು ಬೆಳೆಯ ನಿರೀಕ್ಷೆ ಕೈಗೂಡಿದೆ. ಹುಲುಸಾಗಿ ಬೆಳೆದ ಕಡಲೆ ಬೆಳೆ ಅನ್ನದಾತರಿಗೆ ಭಾರಿ ಆಸೆ ಮೂಡಿಸಿದೆ. ನೂರಾರು ಕನಸು ಕಟ್ಟಿಕೊಂಡ ರೈತಾಪಿ ವರ್ಗಕ್ಕೆ ಕಡಲೆ ಉತ್ತಮ ಫಸಲು ಬರುವ ನಿರೀಕ್ಷೆ ಮೂಡಿಸಿದೆ. ಕಡಲೆ ಬೆಳೆ ಪ್ರಸಕ್ತವರ್ಷ ರೈತರ ಕೈ ಹಿಡಿಯುವುದು ಗ್ಯಾರಂಟಿ.ನಿಯಂತ್ರಣಕ್ಕೆ ಹೆಣಗಾಟ
ಮುಂಗಾರು ಹಂಗಾಮಿನಲ್ಲಿ ಮಳೆಯ ಹೊಡೆತಕ್ಕೆ ಸಿಲುಕಿದ ಹಾಗೂ ಭೀಮಾ ನದಿ ಪ್ರವಾಹದಿಂದ ತತ್ತರಿಸಿರುವ ರೈತ ಹಿಂಗಾರಿನಲ್ಲಿ ಮೂಗಿಗೆ ತುಪ್ಪ ಸವರಿದ ಮಳೆರಾಯನನ್ನು ನಂಬಿದ್ದ. ಮುಂಗಾರಿನ ನಷ್ಟ ಹಾಗೂ ಮಾಡಿದ ಸಾಲ ಚುಕ್ತಾ ಮಾಡಬೇಕಾಯಿತು.ವಾಣಿಜ್ಯ (ಕಡಲೆ) ಬೆಳೆ ಬೆಳೆಯಲು ನಿರ್ಧರಿಸಿ ರೈತ ಬಿತ್ತನೆ ಪೂರ್ಣಗೊಳಿಸಿದ್ದಾನೆ.
ಆದರೆ, ಬೆಳೆದುನಿಂತ ಕಡಲೆ ಬೆಳೆ ಫಸಲು ಇನ್ನೂ ಕೆಲ ದಿನದಲ್ಲಿ ರೈತರ ಕೈಸೇರಲಿದೆ. ಮುಂಗಾರು ವಿಪರೀತ ಮಳೆ ಹಾಗೂ ಪ್ರವಾಹದಿಂದ ಸಂಸಾರ ನಡೆಸುವುದು ಕಷ್ಟ. ಈಗ ಹಿಂಗಾರಿ ಕಡಲೆ ಬೆಳೆ ಪಡೆಯಲು ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತೀವಿ. ಭೂ ತಾಯಿ ವರ ಕೊಡುತ್ತಿದ್ದಾಳೆ. ತನ್ನ ಮಕ್ಕಳಾದ ರೈತರನ್ನು ತಾಯಿ ಎಂದೆಂದಿಗೂ ಕೈಬಿಡುವುದಿಲ್ಲ. ನಮ್ಮ ಬದುಕು ಅರಳಿಸುತ್ತಾಳೆ. ಎಕರೆಗೆ ಕನಿಷ್ಠ 5ರಿಂದ 6 ಕ್ಷಿಂ. ಇಳುವರಿ ಬರುವ ನಿರೀಕ್ಷೆಯಿದೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಸೇತುಮಾಧವ ಅವಧಾನಿ, ಭೀಮಾಶಂಕರ ಪೂಜಾರಿ, ಸಿದ್ದಪ್ಪ ಹತ್ತರಕಿ, ಸಂತೋಷ ಅಲ್ಲಾಪೂರ, ಸೋಮಯ್ಯ ಹಿರೇಮಠ, ಶಿವಪುತ್ರ ನಿವರಗಿ, ವರದಾಚಾರ್ಯ ಅಕಮಂಚಿ, ಲಕ್ಷ್ಮಿಕಾಂತ ಕಮಲಾಪೂರ, ಯಾಕುಬಸಾಬ ಶೇಷಗಿರಿ, ಮಹಾದೇವಪ್ಪ ಅಲ್ಲಾಪೂರ, ಸಂತೋಷ ಕೋನಳ್ಳಿ ಹೇಳಿದರು.