ನೀರು ಬಿಡಬೇಕೆಂಬ ಸಮಿತಿ ಶಿಫಾರಸ್ಸಿಗೆ ರೈತರ ಆಕ್ರೋಶ

KannadaprabhaNewsNetwork |  
Published : Jul 13, 2024, 01:31 AM ISTUpdated : Jul 13, 2024, 01:32 AM IST
12ಕೆಎಂಎನ್‌ಡಿ-1 | Kannada Prabha

ಸಾರಾಂಶ

ಕಳೆದ ವರ್ಷ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲಿಲ್ಲ, ರೈತರು ಬೆಳೆ ಬೆಳೆಯಲೂ ಸಾಧ್ಯವಾಗಲಿಲ್ಲ. ಈಗಲೂ ಸಹ ಮುಂಗಾರು ಹಂಗಾಮಿಗೆ ಬೆಳೆ ಹಾಕಿಲ್ಲ, ಇದ್ದ ನೀರನ್ನೆಲ್ಲಾ ತಮಿಳುನಾಡಿಗೆ ನಿರಂತರವಾಗಿ ಹರಿಸಲಾಯಿತು. ಇದೀಗ ಜಲಾಶಯಕ್ಕೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದ್ದರೂ ಬೆಳೆ ಬೆಳೆಯುವುದಕ್ಕೆ ನೀರು ನೀಡಿಲ್ಲ. ಕೇವಲ ಕೆರೆ ಕಟ್ಟೆಗಳಿಗೆ ಮಾತ್ರ ನೀರನ್ನು ಹರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸುವಂತೆ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಕನ್ನಡಪರ, ಪ್ರಗತಿಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದರು. ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕಳೆದ ವರ್ಷ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲಿಲ್ಲ, ರೈತರು ಬೆಳೆ ಬೆಳೆಯಲೂ ಸಾಧ್ಯವಾಗಲಿಲ್ಲ. ಈಗಲೂ ಸಹ ಮುಂಗಾರು ಹಂಗಾಮಿಗೆ ಬೆಳೆ ಹಾಕಿಲ್ಲ, ಇದ್ದ ನೀರನ್ನೆಲ್ಲಾ ತಮಿಳುನಾಡಿಗೆ ನಿರಂತರವಾಗಿ ಹರಿಸಲಾಯಿತು. ಇದೀಗ ಜಲಾಶಯಕ್ಕೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದ್ದರೂ ಬೆಳೆ ಬೆಳೆಯುವುದಕ್ಕೆ ನೀರು ನೀಡಿಲ್ಲ. ಕೇವಲ ಕೆರೆ ಕಟ್ಟೆಗಳಿಗೆ ಮಾತ್ರ ನೀರನ್ನು ಹರಿಸಲಾಗುತ್ತಿದೆ ಎಂದು ಹೇಳಿದರು.

ನೀರಿಗೆ ಇಂತಹ ಸಂಕಷ್ಟ ಪರಿಸ್ಥಿತಿ ಇರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡಲು ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿಯ ಆದೇಶವನ್ನು ಪಾಲನೆ ಮಾಡಬಾರದು. ಜಲಾಶಯದಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದೆ. ನೆರೆ ರಾಜ್ಯಕ್ಕೆ 16 ಟಿಎಂಸಿ ನೀರು ಬಿಟ್ಟರೆ ಕಾವೇರಿ ಕೊಳ್ಳದ ರೈತರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಾಸ್ತವ ಪರಿಸ್ಥಿತಿ ಗೊತ್ತಿದೆ, ಇಲ್ಲಿನ ರೈತರ ಬವಣೆಯನ್ನು ಕಣ್ಣಾರೆ ಕಂಡಿದ್ದಾರೆ. ಪ್ರಸ್ತುತ ರೈತರು ಬೆಳೆ ಹಾಕದ ಪರಿಸ್ಥಿತಿಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರನ್ನು ಜು.31ರವರೆಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಮಾಡಿರುವುದು ಆವೈಜ್ಞಾನಿಕ. ರಾಜ್ಯ ಸರ್ಕಾರ ಇಂತಹ ರೈತ ವಿರೋಧಿ ಆದೇಶವನ್ನು ಒಪ್ಪಬಾರದು ಎಂದು ಆಗ್ರಹಿಸಿದರು.

ಅದೇ ರೀತಿ ಗೋದಾವರಿ-ಕೃಷ್ಣ-ಕಾವೇರಿ - ಪೆನ್ನಾರ್ ನದಿ ಜೋಡಣೆಯಿಂದ ಕರ್ನಾಟಕ ರಾಜ್ಯದ ನೀರಿನ ಪಾಲು ಕೇವಲ 2.19 ಟಿಎಂಸಿಯಾದರೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ 40 ರಿಂದ 50 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ನದಿ ಜೋಡಣೆಯಿಂದ ಎಲ್ಲಾ ರಾಜ್ಯಕ್ಕೂ ಸಮಾನವಾದ ನೀರಿನ ಪಾಲು ದೊರಕಬೇಕು. ಆದರೆ, ಇಲ್ಲಿ ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯ ಆಗುತ್ತಿರುವುದರಿಂದ ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿದರು.ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಮಲ್ಲನಾಯಕನ ಕಟ್ಟೆ ವಿಜಯ್‌ಕುಮಾರ್, ಪಿ.ಜಿ ನಾಗೇಂದ್ರ, ಸತ್ಯಭಾಮ, ಗೌರಮ್ಮ, ಕಮಲಮ್ಮ, ಸಿ.ಟಿ ಮಂಜುನಾಥ್, ಎಂ.ಎಲ್.ತುಳಸೀಧರ್ ನೇತೃತ್ವ ವಹಿಸಿದ್ದರು.ಕೇಂದ್ರ ಸಚಿವ ಎಚ್ ಡಿಕೆ ಮಧ್ಯ ಪ್ರವೇಶಕ್ಕೆ ಆಗ್ರಹ:

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್. ಸಿ. ಮಂಜುನಾಥ್ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕದ ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಅರಿತಿಲ್ಲ. ಪ್ರತಿ ಬಾರಿ ನೀರು ಬಿಡಿ ಎಂದು ಶಿಫಾರಸ್ಸು ಮಾಡುತ್ತಲೇ ಇದೆ. ಇರುವ 26 ಟಿಎಂಸಿಯಲ್ಲಿ 19 ಟಿಎಂಸಿ ನೀರು ಬಿಟ್ಟರೆ ಇಲ್ಲಿನ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಧ್ಯ ಪ್ರವೇಶಿಸಿ ಇಲ್ಲಿನ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆಗಾಗಿ ಚನ್ನಪಟ್ಟಣದ ಹಳ್ಳಿಯನ್ನು ಸುತ್ತುತ್ತಿದ್ದಾರೆ. ಮೊದಲು ಕಾವೇರಿ ಕೊಳದ ಪ್ರದೇಶವನ್ನು ಸುತ್ತಾಡಿ ಪರಿಸ್ಥಿತಿಯನ್ನು ಅರಿಯಲಿ. ಸಚಿವರಾದ ನಂತರ ಒಂದು ಬಾರಿಯೂ ಕಾವೇರಿ ಕಣಿವೆ ಪ್ರದೇಶ ಪ್ರವಾಸ ಮಾಡಿಲ್ಲ. ಏತಕ್ಕಾಗಿ ಇವರಿಗೆ ನೀರಾವರಿ ಸಚಿವ ಸ್ಥಾನ ಎಂದು ಕಿಡಿಕಾರಿದರು.

ತಮಿಳುನಾಡಿಗೆ ನೀರು ಹರಿಸಿ ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ದ್ರೋಹ ಮಾಡುವ ಮುನ್ನ ವಿಷ ಭಾಗ್ಯ ಕೊಟ್ಟು ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳಬೇಕು. ರಾಜ್ಯದ ಸಂಸದರ ಸಭೆ ಕರೆದು ಚರ್ಚಿಸಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!