ಕಾಲುವೆಗೆ ನೀರು ಹರಿಯುವುದು ಸ್ಥಗಿತಕ್ಕೆ ರೈತರ ಆಕ್ರೋಶ

KannadaprabhaNewsNetwork | Published : Jan 11, 2024 1:30 AM

ಸಾರಾಂಶ

ಮತ್ತೆ ನೀರು ಹರಿಸಲು ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜ.೧ ರಿಂದ ಜ.೧೦ ರವರೆಗೆ ಜಿಎಲ್‌ಬಿಸಿ ಕಾಲುವೆಗೆ ರೈತರ ಹೊಲಗದ್ದೆಗಳಿಗೆ ಅನುಕೂಲವಾಗಲೆಂದು ನೀರು ಹರಿಸಲು ಈ ಮೊದಲು ಆದೇಶ ಮಾಡಲಾಗಿತ್ತು. ನಂತರ ರೈತರ ಒಕ್ಕೂರಲ ಬೇಡಿಕೆಯಿಂದ ಈಗ ಬಿಟ್ಟ ನೀರನ್ನೇ ಜ.೧೫ ರವರೆಗೆ ಮುಂದುವರಿಸಬೇಕು ಎಂದು ಇಲಾಖೆಯಿಂದ ಆದೇಶ ದೊರೆತಿದೆ.

ಆದರೆ ಈಗ ಏಕಾಏಕಿ ಜ.೧೦ಕ್ಕೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹಿಡಕಲ್ ಜಲಾಶಯದ ಅಧೀಕ್ಷರ ಅಭಿಯಂತರ ಕಚೇರಿಯಿಂದ ಆದೇಶ ರವಾನಿಸಲಾಗಿದೆ. ಇದರಿಂದ ಇನ್ನೂ ಬಿಟ್ಟ ನೀರು ಕೆರೆ ಕಟ್ಟೆಗಳಿಗೆ, ಹೊಲಗದ್ದೆಗಳಿಗೆ ತಲುಪುವ ಮುಂಚಿತವಾಗಿಯೇ ನೀರು ಹರಿಸುವುದನ್ನು ಸ್ಥಗಿತಗೊಳಿಸುವ ನಿರ್ಧಾರ ಸರಿಯಾದ ಕ್ರಮವಲ್ಲ ಎಂದು ನಾವಲಗಿ ಗ್ರಾಮದ ರೈತ ಮುಖಂಡ ಅಲ್ಲಪ್ಪ ಹೆಂಡಿಮನಿ ಆಕ್ರೋಶ ವ್ಯಕ್ತಪಡಿಸಿದರು.

ಜ.೧೦ ರಿಂದ ಜ.೧೫ ರವರೆಗೆ ಹೆಚ್ಚುವರಿಯಾಗಿ ೨ ಸಾವಿರ ಕ್ಯುಸೆಕ್‌ ನೀರನ್ನು ಕಾಲುವೆ ಮುಖಾಂತರ ಹಿಡಕಲ್ ಜಲಾಶಯದಿಂದ ಹರಿಸಬೇಕು ಎಂದು ಆದೇಶವಿತ್ತು. ಆದರೆ ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ನೀರಿನ ಸಂಗ್ರಹ ಜಲಾಶಯದಲ್ಲಿ ಕಡಿಮೆ ಇದ್ದು, ಬೇಸಿಗೆ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗುವ ಸಾಧ್ಯತೆ ಖಚಿತವಾದ ಕಾರಣ, ತಕ್ಷಣದಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ ಎಂದು ಹಿಡಕಲ್ ಜಲಾಶಯದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಇದರಿಂದ ಈ ಭಾಗದ ರೈತರ ವಾಣಿಜ್ಯ ಬೆಳೆಗಳು ಒಣಗುವ ಸಾಧ್ಯತೆ ಇದೆ. ಹಿಂದಿನ ಆದೇಶದಂತೆ ಜ.೧೫ ರವರೆಗೆ ನೀರು ಹರಿಸುವುದನ್ನು ಮುಂದುವರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಒಂದು ವೇಳೆ ನೀರು ಹರಿಸಲು ಮುಂದಾಗದಿದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

---------

ಕೋಟ್‌....

ಹಿಡಕಲ್ ಜಲಾಶಯದಿಂದ ಅಧಿಕೃತ ಆದೇಶ ಬಂದಕಾರಣ ಕಾಲುವೆಗೆ ಜ.೧೦ ರಿಂದಲೇ ನೀರು ಹರಿಸುವುದ ಸ್ಥಗಿತಗೊಂಡಿದೆ.

-ಶ್ರೀಧರ ನಂದಿಹಾಳ. ಜಿಎಲ್‌ಬಿಸಿ ಅಧಿಕಾರಿ, ರಬಕವಿ.

Share this article