ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿಗೆ ಜನ ಹೈರಾಣು

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಗ್ರಾಮದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕಾಡಾನೆಗಳ ಉಪಟಳ ಹೆಚ್ಚಿದ್ದು ರೈತರ ಆತಂಕಕ್ಕೆ ಒಳಗಾಗಿದ್ದು ಜನರು ಕಂಗಾಲಾಗಿದ್ದಾರೆ
ಅರಣ್ಯ ಇಲಾಖೆ ನಿರ್ಲಕ್ಷ್ಯ | ಕುಸಿದ ಕಂದಕ, ಸೋಲಾರ್‌ ಬೇಲಿ ನಿರ್ವಹಣೆಗೆ ಅನುದಾನ ಕೊರತೆ ರಂಗೂಪುರ ಶಿವಕುಮಾರ್ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಗ್ರಾಮದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕಾಡಾನೆಗಳ ಉಪಟಳ ಹೆಚ್ಚಿದ್ದು ರೈತರ ಆತಂಕಕ್ಕೆ ಒಳಗಾಗಿದ್ದು ಜನರು ಕಂಗಾಲಾಗಿದ್ದಾರೆ. ಓಂಕಾರ ವಲಯಂಚಿನ ಮಂಚಹಳ್ಳಿ, ಆಲತ್ತೂರು, ಕುರುಬರಹುಂಡಿ, ಹೊಸಪುರ, ಶ್ರೀಕಂಠಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದರೂ ಅರಣ್ಯ ಇಲಾಖೆ ಆನೆಗಳ ಹಾವಳಿ ತಡೆಯಲು ಕ್ರಮ ಕೈಗೊಂಡಿಲ್ಲ. ಓಂಕಾರ ವಲಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಗೆ ಕಾಡಂಚಿನಲ್ಲಿ ಫಸಲು ಮಾಡಿರುವ ರೈತರು ಕಣ್ಣಲ್ಲಿ ಕಣ್ಣು ಇಟ್ಟುಕೊಂಡು ರಾತ್ರಿ ವೇಳೆ ಜೀವದ ಹಂಗು ತೊರೆದು ಕಾಯಲು ಕಾಯುತ್ತಿದ್ದರೂ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ದಾಳಿ ನಡೆಸುತ್ತಲೇ ಇವೆ. ಓಂಕಾರ ವಲಯ ಕಾಡಾನೆಗಳ ಇತರೆ ವಲಯಗಳಿಗೆ ಹೋಲಿಸಿದರೆ ಹೆಚ್ಚಿವೆ. ಓಂಕಾರ ವಲಯದಲ್ಲಿ ಕಂದಕ ಕುಸಿದಿವೆ. ಕುಸಿದ ಕಂದಕ ಸ್ಥಳದಲ್ಲಿ ಆನೆಗಳು ನುಸುಳಿ ನಾಡಿಗೆ ಬಂದು ಬೆಳಗಾತ್ತಲೇ ನಾಡಿನಿಂದ ಕಾಡಿಗೆ ವಾಪಸ್‌ ಆಗುತ್ತಿವೆ. ಅಲ್ಲದೆ ಕಂದಕದ ಬಳಿ ಸೋಲಾರ್‌ ತಂತಿ ಬೇಲಿ ಇದ್ದರೂ ನಿರ್ವಹಣೆ ಇಲ್ಲದೆ ಸೋಲಾರ್‌ ಬೇಲಿ ಬಹುತೇಕ ಕಡೆ ನೆಲಕ್ಕುರುಳಿವೆ. ಅಲ್ಲದೆ ಸೋಲಾರ್‌ ನಿರ್ವಹಣೆ ಹಾಗೂ ಕುಸಿದ ಕಂದಕದ ಮಣ್ಣು ಮೇಲೆತ್ತಲು ಅರಣ್ಯ ಇಲಾಖೆಯು ವಲಯ ಕಚೇರಿಗಳಿಗೆ ಅನುದಾನ ನೀಡಿಲ್ಲ. ರೈತರು ರಾತ್ರಿ ಜಮೀನು ಕಾವಲಿಗೆ ಅರಣ್ಯ ಇಲಾಖೆ ಪಟಾಕಿ ನೀಡುತ್ತಿಲ್ಲ. ಈಗ ವಲಯ ಅರಣ್ಯಾಧಿಕಾರಿಗಳು ಸ್ವಂತ ಹಣದಲ್ಲಿ ಅಲ್ಪ ಸ್ವಲ್ಪ ಪಟಾಕಿ ಖರೀದಿಸಿ ಕೊಟ್ಟಿದ್ದರೂ ಆ ಅನುದಾನವನ್ನು ಅರಣ್ಯ ಇಲಾಖೆ ಭರಿಸಿಲ್ಲ. ಇದು ಕೂಡ ಕಾಡಾನೆಗಳ ಉಪಟಳ ಇತ್ತೀಚಗೆ ಹೆಚ್ಚಲು ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅಲ್ಲದೆ ಸ್ಥಳೀಯ ಶಾಸಕರು ಕೂಡ ರೈತರ ಜಮೀನಿಗೆ ಕಾಡಾನೆಗಳ ಹಾವಳಿ ತಪ್ಪಿಸಲು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಂಚಹಳ್ಳಿ ಗ್ರಾಮದ ರೈತರು ಆಗ್ರಹಿಸಿದ್ದಾರೆ. ಮನಸ್ತಾಪ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌ ಹಾಗೂ ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ನಡುವಿನ ಮನಸ್ತಾಪಕ್ಕೆ ರೈತರು ಬೆಳೆದ ಫಸಲು ಕಾಡಾನೆಗಳಿಗೆ ಆಹಾರವಾಗುತ್ತಿದೆ. ಮಂಚಹಳ್ಳಿಯಲ್ಲಿ ಕಾಡಾನೆ ಹಾವಳಿಗೆ ಫಸಲು ನಷ್ಟ ಗುಂಡ್ಲುಪೇಟೆ: ತಾಲೂಕಿನ ಮಂಚಹಳ್ಳಿ ಗ್ರಾಮದ ನಾಲ್ಕು ಮಂದಿ ರೈತರ ಜಮೀನಿಗೆ ಓಂಕಾರ ವಲಯದ ಕಾಡಾನೆಗಳು ಶನಿವಾರ ರಾತ್ರಿ ದಾಳಿ ನಡೆಸಿ ಫಸಲು ನಾಶ ಪಡಿಸಿವೆ. ಮಂಚಹಳ್ಳಿ ಗ್ರಾಮದ ರೈತರಾದ ಮಹದೇವೇಗೌಡ, ಮಹೇಶಗೆ ಸೇರಿದ ಟೊಮೆಟೊ, ಬದನೆಕಾಯಿ, ಬೀನ್ಸ್‌, ಮೆಣಸಿನಕಾಯಿ ಹಾಗೂ ಹತ್ತಿ ಜಮೀನಿನಲ್ಲಿ ತುಳಿದು ತಿಂದು ಫಸಲು ನಾಶ ಮಾಡಿವೆ. ಅಲ್ಲದೆ ಜೋಳದ ಮೆದೆ ತಿಂದು ನಾಶಪಡಿಸಿದ್ದು ಈ ಸಂಬಂಧ ಓಂಕಾರ ವಲಯ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಇಲಾಖೆಯಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮದ ಬೆಟ್ಟೇಗೌಡ ದೂರಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ರೈತರ ಜಮೀಣಿಗೆ ಭೇಟಿ ನೀಡಿ ಕಾಡಾನೆಗಳ ದಾಳಿಯಿಂದ ನಷ್ಟವನ್ನು ತುಂಬಿಕೊಡಬೇಕು ಹಾಗೂ ಸೋಲಾರ್ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸೋಲಾರ್‌ ತಂತಿ ಹಾಳಾಗಿದೆ ಸರಿಪಡಿಸಿಕೊಡಬೇಕು ಎಂದು ಹಲವು ತಿಂಗಳಿನಿಂದ ಹೇಳಿದರೂ ಅರಣ್ಯ ಇಲಾಖೆ ಇತ್ತ ಗಮನವನ್ನೇ ಹರಿಸುತ್ತಿಲ್ಲ. ಕುಸಿದ ಆನೆ ಕಂದಕದ ಮಣ್ಣು ಮೇಲೆತ್ತಿಲ್ಲ ಎಂದು ದೂರಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಹಾವಳಿ ತಡೆಗಟ್ಟಬೇಕು. ಜತೆಗೆ ಪರಿಹಾರದ ಬದಲು ನಷ್ಟವನ್ನು ರೈತರಿಗೆ ತುಂಬಿಕೊಡಬೇಕು ಎಂದು ಆಗ್ರಹಿಸಿದ್ದು, ಕಾಡಾನೆಗಳಿಂದ ರೈತರ ಪ್ರಾಣಕ್ಕೆ ಕುತ್ತು ಬಂದರೆ ಬಂಡೀಪುರ ಅರಣ್ಯ ಇಲಾಖೆಯೇ ಕಾರಣವಾಗಬೇಕಾಗುತ್ತದೆ ಎಂದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ಬಳಿ ಶನಿವಾರ ರಾತ್ರಿ ಆನೆ ದಾಳಿ ನಡೆಸಿ ತೆಂಗಿನ ಸಸಿಯನ್ನು ಕಿತ್ತು ಹಾಕಿದೆ.

Share this article