ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ರೈತ ಸಂಘ ಆಗ್ರಹ

KannadaprabhaNewsNetwork |  
Published : Mar 25, 2025, 12:47 AM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್2ರಾಣಿಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಹಳ್ಳಳ್ಳಿ ಮೂಲಕ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.   | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ ಎರಡ್ಮೂರು ತಿಂಗಳುಗಳಿಂದ ಅನಧಿಕೃತವಾಗಿ ಮಟ್ಕಾ, ಇಸ್ಪೀಟ್, ವೇಶ್ಯಾವಾಟಿಕೆ, ಅಕ್ರಮ ಮರಳು ಗಣಿಗಾರಿಕೆ, ಮೀಟರ್ ಬಡ್ಡಿ ದಂಧೆ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟದಂತಹ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ.

ರಾಣಿಬೆನ್ನೂರು: ತಾಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಹಳ್ಳಳ್ಳಿ ಮೂಲಕ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ ಎರಡ್ಮೂರು ತಿಂಗಳುಗಳಿಂದ ಅನಧಿಕೃತವಾಗಿ ಮಟ್ಕಾ, ಇಸ್ಪೀಟ್, ವೇಶ್ಯಾವಾಟಿಕೆ, ಅಕ್ರಮ ಮರಳು ಗಣಿಗಾರಿಕೆ, ಮೀಟರ್ ಬಡ್ಡಿ ದಂಧೆ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟದಂತಹ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಇಲಾಖೆಯ ಅಧಿಕಾರಿಗಳು ಎಲ್ಲ ಅಕ್ರಮ ಚಟುವಟಿಕೆಗಳನ್ನು ನೋಡಿಯೂ ನೋಡಿಲ್ಲದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇದರಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.

ಇಲ್ಲವಾದಲ್ಲಿ ಏ. 2ರಂದು ಅಕ್ರಮ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ತೆರಳಿ ಸಾಕ್ಷಿಗಳನ್ನು ಸಂಗ್ರಹಿಸಿಕೊಂಡು ನಗರದಲ್ಲಿನ ಶಾಸಕರ ಆಡಳಿತ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಕುಮಾರಸ್ವಾಮಿ ಪಾಟೀಲ, ಮಂಜುನಾಥ ಸಾಬೋಜಿ, ರೇಣುಕಾ, ನೀಲಮ್ಮ, ಶೈಲಮ್ಮ, ನೇತ್ರಾ, ಜಯಮ್ಮ, ಕೆಂಚಮ್ಮ, ನೂರಜಾನ, ಸೀಮಾ, ಕೊಟ್ರಮ್ಮ, ಯಾಸ್ಮಿನ್, ಫಾತಿಮಾ ಮತ್ತಿತರರಿದ್ದರು.

ಇಂದಿನಿಂದ ಶೇಷಗಿರಿಯಲ್ಲಿ ಕನ್ನಡ ನಾಟಕೋತ್ಸವ

ಹಾನಗಲ್ಲ: ತಾಲೂಕಿನ ರಂಗಗ್ರಾಮ ಶೇಷಗಿರಿಯಲ್ಲಿ ನಾಲ್ಕು ದಿನಗಳ ಕನ್ನಡ ನಾಟಕೋತ್ಸವ ಮಾ. 25ರಿಂದ 28ರ ವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗುರಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬೆಂಗಳೂರಿನ ರಂಗಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶೇಷಗಿರಿ ಇವುಗಳ ಸಹಯೋಗದಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ನಡೆಯುವ ನಾಟಕೋತ್ಸವವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಪರಶೂರಾಮ ಅಂಬಿಗೇರ ಅಧ್ಯಕ್ಷತೆ ವಹಿಸುವರು. ಬರಹಗಾರ ಟಿ. ಸುರೇಂದ್ರನಾಥ, ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನೀಕಟ್ಟಿ, ಶಿವಲಿಂಗಪ್ಪ ತಲ್ಲೂರ, ಬಿ.ವಿ. ಬಿರಾದಾರ, ಶಂಕ್ರಪ್ಪ ಗುರಪ್ಪನವರ, ನಿಜಗುಣಿ ರೊಟ್ಟಿ, ಬಸವರಾಜ ಬಡೆಮ್ಮಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಾ. 25ರಂದು ಶ್ರೀನಿವಾಸಮೂರ್ತಿ ನಿರ್ದೇಶನದ ಬಹುಮುಖಿ, 26ರಂದು ನಿರಂಜನ ಖಾಲಿಕೊಟ ನಿರ್ದೇಶನದ ಡೋರ್ ನಂ. 1, 27ರಂದು ರೋಹಿತ ಬೈಕಾಡಿ ನಿರ್ದೇಶನದ ಬೆತ್ತಲಾಟ, 28ರಂದು ನಿರ್ದೇಶನದ ಅಭಿಮನ್ಯು ಭೂಪತಿ ಅವರ ನಿರ್ದೇಶನದ ಸುಡಗಾಡ ಸಂಘ ನಾಟಕಗಳು ಪ್ರದರ್ಶನಗೊಳ್ಳಲಿವೆ.

ನಿತ್ಯ ನಾಟಕದ ನಂತರ ನಡೆಯುವ ಸಂವಾದದಲ್ಲಿ ಮಹಾದೇವಿ ಕಣವಿ, ಹರೀಶ ಮೂಶಪ್ಪನವರ, ಕುಮಾರ ಕಾಟೇನಹಳ್ಳಿ, ಶಮಂತಕುಮಾರ, ಶಂಭುಲಿಂಗ ಬಣಕಾರ, ಡಾ. ಎಂ. ಪ್ರಸನ್ನಕುಮಾರ, ನರಸಿಂಹ ಕೋಮಾರ, ಕೆ.ಎಲ್. ದೇಶಪಾಂಡೆ, ಗಿರೀಶ ದೇಶಪಾಂಡೆ, ಮಾಲತೇಶ ರೊಟ್ಟಿ, ಎಂ.ಆರ್. ಹೆಗಡೆ, ರಾಜು ಹುಲ್ಲತ್ತಿ, ಪುಟ್ಟರಾಜ ಕೋಡಿಹಳ್ಳಿ, ಚೇತನ್ ಭಟ್, ಉಮೇಶ, ನಿಜಗುಣಿ ಹೊಸಮನಿ, ಹನುಮಂತ ಗೊಲ್ಲರ, ಸಿದ್ದಪ್ಪ ಅಂಬಿಗೇರ, ನಿಂಗಪ್ಪ ಹರಿಜನ, ಅಶೋಕ ಕೊಂಡೋಜಿ, ಮಂಜುನಾಥ ಬಡೆಮ್ಮಿ, ಶಿವಾನಂದ ಕ್ಯಾಲಕೊಂಡ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ