ಹಾವೇರಿ: ತಾಲೂಕಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ತೀವ್ರ ಮಳೆ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ತಾಲೂಕನ್ನು ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಅಗತ್ಯ ಬರ ಪರಿಹಾರ ನೀಡಬೇಕು ಎಂದು ಒತ್ತಾಯಸಿ ಹಾವೇರಿ ತಾಲೂಕು ಕೃಷಿಕ ಸಮಾಜದಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರೈತರು ಸಾಲ-ಶೂಲ ಮಾಡಿ ಎಕರೆಗೆ ಸುಮಾರು 20 ಸಾವಿರದಿಂದ 25 ಸಾವಿರದ ವರೆಗೆ ವೆಚ್ಚ ಮಾಡಿದ್ದು, ಬೆಳೆ ಹಾನಿಯಿಂದ ಆ ಹಣವೂ ಮರಳಿ ಬರುವ ನಿರೀಕ್ಷೆ ಇಲ್ಲದಂತಾಗಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಹಾವೇರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ರೈತರಿಗೆ ಪರಿಹಾರ, ಬೆಳೆ ನಷ್ಟ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕೃಷಿಕ ಸಮಾಜದ ಮುಖಂಡರಾದ ವೀರಪ್ಪ ಕಳ್ಳಿಹಾಳ, ನಾಗೇಂದ್ರಪ್ಪ ಕೆಂಗೊಂಡ, ಗಣೇಶಪ್ಪ ದೊಡ್ಡಮನಿ, ಅಶೋಕರೆಡ್ಡಿ ಮರಚರೆಡ್ಡಿ, ಬಸವರಾಜ ಡೊಂಕಣ್ಣನವರ, ಶಿವಪುತ್ರಪ್ಪ ಶಿವಣ್ಣನವರ, ನಾಗಪ್ಪ ವಿಭೂತಿ, ಬಸನಗಗೌಡ ಹರ್ತಿ, ಪರಮೇಶ್ವರ ನರಗುಂದ, ಕರಬಸಪ್ಪ ಕಡ್ಲಿ, ರುದ್ರಪ್ಪ ಕಾಳಪ್ಪನವರ, ರೇವಣಸಿದ್ದಪ್ಪ ಸೊಪ್ಪಿನ್, ಮಹೇಶಪ್ಪ ಹೆಡಿಯಾಲ, ಬುದ್ಧಿವಂತಪ್ಪ ಕಾಸಂಬಿ ಸೇರಿದಂತೆ ಇತರರು ಇದ್ದರು.