ಕನ್ನಡಪ್ರಭವಾರ್ತೆ ತಿಪಟೂರು
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ನೆಲಕಚ್ಚಿವೆ. ರಾಜ್ಯಾದ್ಯಂತ ಶೇ. ೩೪ರಷ್ಟು ಮಳೆ ಕೊರತೆ ದಾಖಲಾಗಿದ್ದು, ೧೯೦ ತಾಲೂಕುಗಳು ತೀವ್ರ ಸಂಕಷ್ಟದಲ್ಲಿವೆ. ಮೊದಲ ಹಂತದಲ್ಲಿ ಸರ್ಕಾರ ೧೦೧ ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸುವ ಪ್ರಕ್ರಿಯೆ ನಡೆಸಿದೆ. ತುಮಕೂರು ಜಿಲ್ಲೆಯ ಬಹುತೇಕ ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲಾಗಿದ್ದರೂ, ಭೀಕರ ಬರ ಎದುರಿಸುತ್ತಿರುವ ತಿಪಟೂರು ತಾಲ್ಲೂಕನ್ನು ನಿರ್ಲಕ್ಷö್ಯದಿಂದ ಕೈಬಿಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಾದ್ಯಂತ ಮಳೆಯಿಲ್ಲದೆ ರಾಗಿ ಸೇರಿದಂತೆ ಯಾವುದೇ ಬೆಳೆಗಳನ್ನು ಈ ವರ್ಷ ಬಿತ್ತನೆ ಮಾಡಲಾಗುತ್ತಿಲ್ಲ. ಅಲ್ಲಲ್ಲಿ ಸೋನೆ ಮಳೆಗೆ ಬಿತ್ತಿದ್ದ ಕೆಲ ಬೆಳೆಗಳು ಮೊಳಕೆಯೊಡೆದು ಒಣಗಿ ನಿಂತಿವೆ. ತೆಂಗು, ಅಡಿಕೆ, ಬಾಳೆ ಇತರೆ ಪ್ರಮುಖ ವಾಣಿಜ್ಯ ಬೆಳೆಗಳು ತೀವ್ರ ಮಳೆ ಕೊರತೆ ಹಾಗೂ ಅಂತರ್ಜಲದ ಕೊರತೆಯಿಂದ ನಾಶದ ಅಂಚಿಗೆ ತಲುಪುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಅಭಾವ ಸೃಷ್ಟಿಯಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದ ಅನ್ನದಾತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ತುರ್ತು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಕೂಡಲೆ ಸರ್ಕಾರ ತಾರತಮ್ಯ ಧೋರಣೆ ಬಿಟ್ಟು ತಕ್ಷಣವೇ ತಿಪಟೂರು ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಬೆಳೆ ಪರಿಹಾರ, ಮೇವು ಬ್ಯಾಂಕ್ ಸ್ಥಾಪನೆ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಇದೆ ವೇಳೆ ಅವರು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ರೇಣುಕಾ ಮೂರ್ತಿ ಕುರುಬರಹಳ್ಳಿ ಹಾಗೂ ಪ್ರಮುಖ ಮುಖಂಡರಾದ ಯೋಗಾನಂದಸ್ವಾಮಿ, ನವೀದ್ ಮತ್ತಿತರರು ಉಪಸ್ಥಿತರಿದ್ದರು.