ಸಂಪೂರ್ಣ ರಾಜ್ಯದ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork |  
Published : Aug 30, 2026, 01:15 AM IST
ಗಗಗಗ | Kannada Prabha

ಸಾರಾಂಶ

ಬೆಂಗಳೂರು ಬೆಳೆದರೆ ರಾಜ್ಯ ಬೆಳೆದಂತೆ ಎಂಬ ಕಲ್ಪನೆಯಿಂದ ಹೊರಬಂದು, ರಾಜ್ಯದ ಪ್ರತಿಯೊಂದು ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಬೆಂಗಳೂರು ಬೆಳೆದರೆ ರಾಜ್ಯ ಬೆಳೆದಂತೆ ಎಂಬ ಕಲ್ಪನೆಯಿಂದ ಹೊರಬಂದು, ರಾಜ್ಯದ ಪ್ರತಿಯೊಂದು ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದ ಎಸ್ ಐಟಿ ಇಂಜಿನಿಯರಿಂಗ್ ಕಾಲೇಜಿನ ಬಿರ್ಲಾ ಆಡಿಟೋರಿಯಂ ನಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ಆಯೋಜಿಸಿದ್ದ ಚಿಂತನ ಸಮಾವೇಶದ ಸಮಾರೋಪದ ಸಮಾರಂಭದಲ್ಲಿ ಮಾತನಾಡಿದರು. ಬೆಂಗಳೂರಿನ ಅಭಿವೃದ್ಧಿಯೊಂದನ್ನೇ ರಾಜ್ಯದ ಅಭಿವೃದ್ಧಿ ಎಂದು ಭಾವಿಸುವ ಸೀಮಿತ ಮನೋಭಾವದಿಂದ ಹೊರಬಂದು ಸಮಗ್ರ ಕರ್ನಾಟಕದ ಪ್ರಗತಿಗೆ ಶ್ರಮಿಸಬೇಕಿದೆ. ಶಾಸಕ ಅಥವಾ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಲ್ಲದೆ, ಒಬ್ಬ ಹೆಮ್ಮೆಯ ಕನ್ನಡಿಗನಾಗಿ ಮತ್ತು ಸಮೃದ್ಧ ಕರ್ನಾಟಕದ ಕನಸು ಹೊತ್ತ ವ್ಯಕ್ತಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಇಂತಹ ಚಿಂತನ ವೇದಿಕೆಗಳ ಅಗತ್ಯವಿದೆ. ಈ ವೇದಿಕೆಯನ್ನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.

ಇಡೀ ಜಗತ್ತು ಇಂದಿನ ಭಾರತ ಹಾಗೂ ಬೆಂಗಳೂರಿನತ್ತ ಗಮನ ನೆಟ್ಟಿದ್ದು, ದೇಶದ ಅಭಿವೃದ್ಧಿ ಕರ್ನಾಟಕದ ಮುಖೇನವೇ ಸಾಗಬೇಕಿದೆ. ಭಾರತದ ಒಟ್ಟಾರೆ ಬೆಳವಣಿಗೆಗೆ ಕರ್ನಾಟಕವು ಮುಖ್ಯ ನಾಯಕತ್ವ ವಹಿಸಬೇಕು ಹಾಗೂ ರಾಜ್ಯದ ಮೂಲಕವೇ ದೇಶದ ಅಭಿವೃದ್ಧಿ ಸಾಗಬೇಕು. ದೇಶದಲ್ಲಿ ಶೇ.55 ರಿಂದ 60 ರಷ್ಟು ಜನಸಂಖ್ಯೆಯು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಈ ಡೆಮೋಗ್ರಾಫಿಕ್ ಡಿವಿಡೆಂಡ್ (ಜನಸಂಖ್ಯಾ ಲಾಭಾಂಶ) ದೇಶದ ಅತಿ ದೊಡ್ಡ ಶಕ್ತಿಯಾಗಿದೆ. ಈ ಯುವಶಕ್ತಿ ಮತ್ತು ನೈಪುಣ್ಯತೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದರೆ ಮಾತ್ರ ಅದು ಕರ್ನಾಟಕ ಹಾಗೂ ಇಡೀ ದೇಶಕ್ಕೆ ದೊಡ್ಡ ಆಸ್ತಿಯಾಗಲಿದೆ. ಯುವಜನರ ಸಾಮರ್ಥ್ಯವನ್ನು ದೇಶದ ಏಳಿಗೆಗಾಗಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಗಂಭೀರವಾಗಿ ಯೋಚಿಸಿ, ಹೆಚ್ಚೆಚ್ಚು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಕಳೆದ 12-13 ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಸತತ ಪ್ರಯತ್ನದ ಫಲವಾಗಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ ದೇಶದಲ್ಲಿ ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆಯಾಗುವ ಹಂತ ತಲುಪಿದೆ. ಯುವಶಕ್ತಿಯನ್ನು ಸರಿದಾರಿಯಲ್ಲಿ ಮುನ್ನಡೆಸಿದಾಗ ಮಾತ್ರವೇ ಯುವ ಸಂಪತ್ತು ದೇಶದ ಆಸ್ತಿಯಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಯುವಜನರ ಸಮಸ್ಯೆಗಳು ಹಾಗೂ ಪರಿಸ್ಥಿತಿಯ ಕುರಿತು ವರದಿಗಳು ಪ್ರಕಟಗೊಳ್ಳುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಗಮನಹರಿಸಿ ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದರು.

ಇದಕ್ಕೂ ಮುನ್ನ ಬೆಂಗಳೂರು ಹಾಗೂ ರ್ನಾ ಟಕ ಸಮಗ್ರ ಅಭಿವೃದ್ಧಿ ಗೆ ಸಂಬಂಧಿಸಿದ ಸಮಕಾಲೀನ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ಮೊದಲ ಗೋಷ್ಠಿಯಲ್ಲಿ ಡಾ. ವೇಣುಗೋಪಾಲ್ ಹಾಗೂ ಎರಡನೇ ಗೋಷ್ಠಿಯಲ್ಲಿ ಮದನ್ ಪದಕಿ ಗೋಷ್ಠಿಯ ನೇತೃತ್ವ ವಹಿಸಿದ್ದು ಇದರಲ್ಲಿ ಮೊದಲ ಗೋಷ್ಠಿಯಲ್ಲಿ ಎರಡನೇ ವಿಮಾನ ನಿಲ್ದಾಣ , ರಸ್ತೆ ಸೇರಿ ಮೂಲ ಸೌಕರ್ಯಗಳ ಬಗ್ಗೆ ಚರ್ಚೆ ನಡೆದರೆ ಎರಡನೇ ಗೋಷ್ಠಿಯಲ್ಲಿ ಜಿಡಿಪಿ, ಸ್ವಯಂ ಉದ್ಯೋಗಗಳ ಬಗ್ಗೆ ತಜ್ಞರು ಅಭಿಪ್ರಾಯ ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಶ್ರೀನಿವಾಸ ಬಳ್ಳಿ, ವಿಜಯಕುಮಾರ ಮಾಕಲ್, ಡಾ:ಸಿಬಂತಿ ಪದ್ಮನಾಭ,ಉದ್ಯಮಿಗಳಾದ ಕೆಜಿ ಚಂದ್ರಶೇಖರ, ಡಾ.ಸುಜ್ಞಾನ ಹಿರೇಮಠ ಭಾಗವಹಿಸಿದ್ದರು.ವೇದಿಕೆಯಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್, ಅಭಿವೃದ್ಧಿ ಚಿಂತನ ಸಮಾವೇಶದ ಸಂಯೋಜಕರಾದ ಖ್ಯಾತ ಉದ್ಯಮಿ ಹುಬ್ಬಳ್ಳಿಯ ಡಾ:ವಿಎಸ್ ವಿ ಪ್ರಸಾದ್,ತುಮಕೂರಿನ ಸುರೇಶ್ ಜಿಆರ್ ವೇದಿಕೆಯಲ್ಲಿದ್ದರು.

ಫೋಟೋ : ಎಸ್ ಐಟಿ ಎಂಜಿನಿಯರಿಂಗ್ ಕಾಲೇಜಿನ ಬಿರ್ಲಾ ಆಡಿಟೋರಿಯಂ ನಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ಆಯೋಜಿಸಿದ್ದ ಚಿಂತನ ಸಮಾವೇಶದ ಸಮಾರೋಪದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದ್ದರು.

------

ಕೋಟ್‌...

ದೇಶದ ಯುವಸಂಪತ್ತು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದಿದ್ದರೆ, ಅದು ಭವಿಷ್ಯದಲ್ಲಿ ಭಾರಿ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ರೂಪಾಂತರಗೊಳ್ಳಲಿದೆ. ದೇಶದ ಯುವಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಕರ್ತವ್ಯವಾಗಿದೆ. ಗ್ರಾಮೀಣ ಯುವಕರಿಗೆ ಸೂಕ್ತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಸಿಗದಿದ್ದಾಗ, ಹಲವು ಸಮಾಜಘಾತಕ ಶಕ್ತಿಗಳು ಅವರನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತವೆ. ಇದರಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನಕ್ಸಲಿಸಂ ಹುಟ್ಟಿಕೊಳ್ಳಲು ಹಾಗೂ ವ್ಯಾಪಿಸಲು ದಾರಿಯಾಗಲಿದೆ. - ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!