ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಜಲಾನಯನ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಲಾನಯನ ಪ್ರದೇಶದ ಎಲ್ಲಾ ಶಾಸಕರು ಒಗ್ಗಟ್ಟಿನ ಹೋರಾಟ ನಡೆಸುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಮುಖಂಡ ಸಭೆಯಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ತಾಲೂಕಿನ ರೈತರ ಧ್ವನಿಯಾಗಿ ರಾಜ್ಯ ವಿಧಾನ ಸಭೆಯಲ್ಲಿ ಹೇಮಾವತಿ ನೀರಿಗಾಗಿ ಧ್ವನಿಯೆತ್ತಿದ್ದಾರೆ. ಇದಕ್ಕಾಗಿ ರೈತಸಂಘ ಅವರನ್ನು ಅಭಿನಂದಿಸುತ್ತದೆ ಎಂದರು.
ಹೇಮಾವತಿ ನೀರಿಗಾಗಿ ಶಾಸಕ ಎಚ್.ಟಿ.ಮಂಜು ಸದನದಲ್ಲಿ ಧ್ವನಿಯೆತ್ತಿದಾಗ ಅವರ ಧ್ವನಿ ಏಕಾಂಗಿಯಾಗಿತ್ತು. ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದ ನಾಗಮಂಗಲದ ಶಾಸಕ ಹಾಗೂ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಲಾನಯನ ಪ್ರದೇಶ ವ್ಯಾಪ್ತಿ ಯಾವುದೇ ಶಾಸಕರು ರೈತರ ಹಿತಕ್ಕಾಗಿ ಧ್ವನಿಯೆತ್ತಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಎಲ್ಲಾ ಶಾಸಕರು ಪಕ್ಷಬೇದ ಮರೆತು ರೈತರ ಪರ ನಿಲ್ಲುತ್ತಾರೆ. ಆದರೆ ಹೇಮಾವತಿ ಜಲಾನಯನ ಪ್ರದೇಶದ ಯಾವುದೇ ಶಾಸಕರು ರೈತರ ಪರವಾಗಿ ಮಾತನಾಡದಿರುವುದನ್ನು ಖಂಡಿಸಿದರು.
ನಾವು ಬೇಸಿಗೆ ಬೆಳೆಗೆ ನೀರು ಕೇಳುತ್ತಿಲ್ಲ. ಜನರ ಕುಡಿಯುವ ನೀರು, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಕೇಳುತ್ತಿದ್ದೇವೆ. ಈ ಹಿಂದೆಯೂ ರೈತ ಹೋರಾಟಕ್ಕೆ ಮಣಿದು ಸರ್ಕಾರ ನೀರು ಹರಿಸಿದೆ. ಮೇ ತಿಂಗಳ ಅಂತ್ಯದವೆರೆಗೂ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಸದನದಲ್ಲಿ ಸಚಿವರು ಉತ್ತರ ಕೊಡುವುದನ್ನು ರೈತರು ಒಪ್ಪುವುದಿಲ್ಲ ಎಂದು ಕಿಡಿಕಾರಿದರು.ಹೇಮಾವತಿ ನೀರಿನ ವಿಚಾರದಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಿನ ಮಂತ್ರ ಪಠಿಸಿ ಸರ್ಕಾರದ ಹೇಳಿಕೆಯನ್ನು ತಿರಸ್ಕರಿಸಿ ತಕ್ಷಣವೇ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸುವಂತೆ ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಎಂ.ವಿ.ರಾಜೇಗೌಡ, ಮರುವನಹಳ್ಳಿ ಸಂಕರ್, ಕರೋಟಿ ತಮ್ಮಯ್ಯ, ನಾಗೇಗೌಡ, ಮುದ್ದುಕುಮಾರ್, ನಗರೂರು ಕುಮಾರ್, ಕೃಷ್ಣಾಪುರ ರಾಜಣ್ಣ ಸೇರಿದಂತೆ ಹಲವರಿದ್ದರು.