ಶಿರಸಿ: ರೈತರ ಸಾಲಮನ್ನಾ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ, ಬೆಳೆವಿಮೆ ಪರಿಹಾರ ಸೌಲಭ್ಯವನ್ನು ರೈತರಿಗೆ ಒದಗಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ತಾಲೂಕಿನ ಬದನೋಡದಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸಿದರು.ಕಳೆದ ವರ್ಷದ ಬರಗಾಲದ ಪರಿಹಾರದ ಹಣ ಜಮಾ ಆಗಿಲ್ಲ. ಕಳೆದ ೨ ವರ್ಷದಿಂದ ಬೆಳೆವಿಮೆ ರೈತರ ಖಾತೆಗೆ ಜಮಾ ಆಗಿಲ್ಲ. ರೈತರನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಸುಮಾರು ೩ ಗಂಟೆ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ನಮ್ಮನ್ನಾಳುವ ಜನಪ್ರತಿನಿಧಿಗಳು ಮಾನ- ಮರ್ಯಾದೆ ಬಿಟ್ಟು ನಿಂತಿದ್ದಾರೆ. ಪಂಪ್‌ಸೆಟ್‌ಗೆ ಮೀಟರ್‌ಗೆ ರೈತರ ಆಧಾರ ಕಾರ್ಡ್ ನಂಬರ್ ಜೋಡಣೆ ಮಾಡಿ, ಖಾಸಗೀಕರಣ ಮಾಡುವ ಹುನ್ನಾರಕ್ಕೆ ಸರ್ಕಾರ ಕೈ ಹಾಕಿದ್ದು, ಕಳೆದ ವರ್ಷದ ಪರಿಹಾರದ ಹಣ ಇನ್ನೂ ಜಮಾ ಆಗಿಲ್ಲ. ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಯಿಂದ ಬೆಳೆದ ಬೆಳೆಗಳೆಲ್ಲವೂ ಕೊಳೆತಿದ್ದು, ಬೆಳೆವಿಮೆ ಪರಿಹಾರದಲ್ಲಿಯೂ ಪ್ರತಿವರ್ಷ ತಾರತಮ್ಯ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಧೂಳುಮಯ ವಾತಾವರಣ ಸೃಷ್ಟಿಯಾಗಿ ಈ ರಸ್ತೆಯಲ್ಲಿ ಓಡಾಡುವ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಡಕೆ ಬೆಳೆವಿಮೆ, ಬರಗಾಲ ಪರಿಹಾರ ಮತ್ತು ಇನ್ನುಳಿದ ಬೆಳೆಗಳ ವಿಮೆ ಕೂಡಲೇ ಜಮಾ ಮಾಡಬೇಕು. ದಾಸನಕೊಪ್ಪದಲ್ಲಿ ಪದವಿಪೂರ್ವ ಕಾಲೇಜು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.ರೈತರ ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಿ, ಹೊಸ ಸಾಲ ನೀಡಬೇಕು. ಕಸ್ತೂರಿರಂಗನ್ ವರದಿಯಲ್ಲಿ ಶಿರಸಿ ತಾಲೂಕಿನ ಹಳ್ಳಿಗಳು ಸೇರ್ಪಡೆಯಾಗಿದ್ದು, ಅದನ್ನು ಕೃಷಿಕರ ಪರವಾಗಿರುವಂತೆ ಸರಿಪಡಿಸಬೇಕು. ಖರೀದಿ ಕೇಂದ್ರಗಳನ್ನು ಕಾಯಂ ಆಗಿ ದಾಸನಕೊಪ್ಪದಲ್ಲಿ ತೆರೆಯುವಂತಾಗಬೇಕು. ಬದನಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು. ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿ ತಕ್ಷಣ ಪ್ರಾರಂಭಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ರೈತರ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕಾಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ಒಂದು ವಾರದೊಳಗೆ ಬರಗಾಲದ ಪರಿಹಾರ ಮತ್ತು ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾ ಆಗಬೇಕು. ಇಲ್ಲವಾದಲ್ಲಿ ಮತ್ತೆ ಬೀದಿಗಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಪ್ರಮೋದ ಜಕ್ಕಣ್ಣನವರ್, ತಾಲೂಕು ಕಾರ್ಯದರ್ಶಿ ನಾಗರಾಜ ಡಾಂಗೆ, ಸಹ ಕಾರ್ಯದರ್ಶಿ ನವೀನ್ ಜಡೆದರ್, ಶ್ರೀಧರ ಪಾಟೀಲ, ಜಾಕೀರ ಹುಸೇನ, ಅಕ್ಷಯ ಜಕಲಣ್ಣನವರ, ದೀಪಕ ಶೇಟ್, ಜಯಪುತ್ರ ಗುಡಿ ಹಿಂದ್ಲರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಹೆದ್ದಾರಿಯಲ್ಲಿ ಊಟದ ತಯಾರಿರೈತರ ಬೇಡಿಕೆ ಈಡೇರಿಸಲು ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ರೈತರು, ಅಲ್ಲಿಯವರೆಗೆ ಹೆದ್ದಾರಿ ತೆರವುಗೊಳಿಸುವುದಿಲ್ಲ. ನಿರ್ದಿಷ್ಟ ದಿನಾಂಕ ನೀಡಿ, ಸಭೆ ನಡೆಸಿ, ರೈತರ ನೆರವಿಗೆ ಧಾವಿಸಬೇಕು. ಇಲ್ಲಿಯೇ ಊಟ ತಯಾರಿಸುತ್ತೇವೆ ಎಂದು ಹೇಳಿದಾಗ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ರೈತರ ಮನವೊಲಿಸಿ, ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಸಭೆ ನಡೆಸಿ, ನ್ಯಾಯ ದೊರಕಿಸುತ್ತೇನೆ ಎಂದು ಸಮಾಧಾನ ಪಡಿಸಿದಾಗ ಪ್ರತಿಭಟನೆ ಮೊಟಕುಗೊಳಿಸಿದರು.