ಕನಕಪುರ: ನಾವು ಬಡವರ ಪರ ಪಕ್ಷ ಎಂದು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಬಡವರ ಪಡಿತರ ಆಹಾರ ಚೀಟಿಯನ್ನು ಅವೈಜ್ಞಾನಿಕವಾಗಿ ರದ್ದು ಮಾಡಿ, ಬಡವರ ಅನ್ನ ಕಿತ್ತುಕೊಳ್ಳುತ್ತಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಆರೋಪಿಸಿದರು. ಬಿಪಿಎಲ್ ಕಾರ್ಡ್ ರದ್ದು ಖಂಡಿಸಿ, ರೈತರ ಬಿಪಿಎಲ್ ಕಾರ್ಡ್ ಹಿಂತಿರುಗಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತದ ಮೂಲಕ ಗುರುವಾರ ರೈತ ಸಂಘದ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಯಿಂದ ಬರಿದಾಗಿರುವ ಸರ್ಕಾರವನ್ನು ಉಳಿಸಿಕೊಳ್ಳಲು ಈಗ ಬಡವರ ಬಿಪಿಎಲ್ ಕಾರ್ಡನ್ನು ಕಿತ್ತು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಯ ಕುಮಾರಸ್ವಾಮಿ, ಡಿ.ಕೆ.ರಾಮಕೃಷ್ಣ ಮಾತನಾಡಿ ಬಡವರು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಪಡೆಯಲು ಐಟಿಆರ್ ಮಾಡಿಸುತ್ತಾರೆ. ಸಣ್ಣಪುಟ್ಟ ವ್ಯವಹಾರ ನಡೆಸಲು ಜಿಎಸ್‌ಟಿ ಮಾಡಿಸುತ್ತಾರೆ. ಅದನ್ನೇ ನೆಪವಾಗಿಸಿಕೊಂಡು ಸರ್ಕಾರ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ವೈಜ್ಞಾನಿಕವಾಗಿದ್ದು ಕೂಡಲೇ ಬಿಪಿಎಲ್ ಕಾರ್ಡಗಳನ್ನು ಹಿಂತಿರುಗಿಸಬೇಕೆಂದು ಆಗ್ರಹಿಸಿದರು.
ವಿವಿಧ ಸಂಘಟನೆ ಮುಖಂಡರಾದ ಗಬ್ಬಾಡಿ ಕಾಳೇಗೌಡ, ಕನ್ನಡ ಭಾಸ್ಕರ್, ಸ್ಟುಡಿಯೋ ಚಂದ್ರು, ಶೇಖರ್, ಸುವರ್ಣಮ್ಮ, ಶಿವಸ್ವಾಮಿ ಉಪಸ್ಥಿತರಿದ್ದರು. ಆಹಾರ ಇಲಾಖೆ ವಿರುದ್ಧ ಘೋಷಣೆ ಕೂಗಿ ಗ್ರೇಡ್ -2 ತಹಸಿಲ್ದಾರ್ ಮನೋಹರ್‌ಗೆ ಮನವಿ ಪತ್ರ ಸಲ್ಲಿಸಿದರು.ಕೆ ಕೆ ಪಿ ಸುದ್ದಿ 02:
ರದ್ದು ಮಾಡಿರುವ ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಬೇಕೆಂದು ಆಗ್ರಹಿಸಿ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ನೇತೃತ್ವದಲ್ಲಿ ಗ್ರೇಡ್ -2 ತಹಸಿಲ್ದಾರ್ ಮನೋಹರ್‌ಗೆ ಮನವಿ ಪತ್ರ ಸಲ್ಲಿಸಿದರು.