ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಒತ್ತಾಯ
ಜಿಲ್ಲೆಯಲ್ಲಿ ಯೂರಿಯಾ ಹಾಗೂ ರಾಸಾಯನಿಕ ಗೊಬ್ಬರದ ಕೊರತೆ, ಬಿತ್ತನೆ ಬೀಜಗಳ ಅಭಾವ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. “ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ” ಎಂಬ ಘೋಷಣೆ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು.ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ರಾಜ್ಯದಲ್ಲಿ ಗೊಬ್ಬರದ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಹಿಂದೆ ಸುಮಾರು ೧,೩೦೦ಕ್ಕೆ ದೊರೆಯುತ್ತಿದ್ದ ಗೊಬ್ಬರದ ಚೀಲ ಈಗ ೨,೨೦೦ಕ್ಕೆ ತಲುಪಿದೆ. ಒಂದು ಎಕರೆ ಕೃಷಿ ಭೂಮಿಗೆ ನಾಲ್ಕು ಚೀಲ ಗೊಬ್ಬರ ಅಗತ್ಯವಿದ್ದರೂ ಸರ್ಕಾರ ಕೇವಲ ಒಂದು ಚೀಲ ಮಾತ್ರ ವಿತರಿಸುತ್ತಿದೆ. ಇದರಿಂದ ರೈತರು ಅಗತ್ಯ ಪ್ರಮಾಣದ ಗೊಬ್ಬರವಿಲ್ಲದೆ ಬೆಳೆ ಬೆಳೆಯಲು ಪರದಾಡುವಂತಾಗಿದೆ ಎಂದು ದೂರಿದರು.ಮಳೆಗಾಲ ಆರಂಭವಾಗಿ ಬಿತ್ತನೆ ಚಟುವಟಿಕೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಯೂರಿಯಾ ಮತ್ತು ಗೊಬ್ಬರ ಲಭ್ಯವಾಗದಿದ್ದರೆ ಕೃಷಿ ಕಾರ್ಯ ಸಂಪೂರ್ಣ ಅಸ್ತವ್ಯಸ್ತವಾಗಲಿದೆ. ಹೆಚ್ಚಿನ ಹಣ ನೀಡಿ ಖರೀದಿಸಲು ಮುಂದಾದರೂ ಗೊಬ್ಬರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಣ್ಣ ಮತ್ತು ಅತಿಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳ ಬದಲಿಗೆ ಲಿಕ್ವಿಡ್ ಉತ್ಪನ್ನಗಳನ್ನು ನೀಡಲಾಗುತ್ತಿದ್ದು, ಅವುಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಸರ್ಕಾರ ರೈತರಿಗೆ ಅಗತ್ಯವಿರುವ ಯೂರಿಯಾ, ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಮರ್ಪಕ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದರು.ಗೊಬ್ಬರ ಖರೀದಿಸಲು ರೈತರು ಹಣ ಹಿಡಿದು ಸೊಸೈಟಿಗಳ ಮುಂದೆ ದಿನವಿಡೀ ಸಾಲಿನಲ್ಲಿ ನಿಂತರೂ ‘ಕೆವೈಸಿ ಪೂರ್ಣಗೊಂಡಿಲ್ಲ’ ಎಂಬ ನೆಪ ಹೇಳಿ ವಾಪಸ್ ಕಳುಹಿಸಲಾಗುತ್ತಿದೆ. ಇನ್ನೊಂದೆಡೆ ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.