ಮಕ್ಕಳ ಸುರಕ್ಷತೆ ನಮ್ಮೆಲ್ಲರ ಹೊಣೆ: ಜಿ.ಕೆ. ದಾಕ್ಷಾಯಿಣಿ

KannadaprabhaNewsNetwork |  
Published : Jun 13, 2026, 01:30 AM IST
12ಎಚ್ಎಸ್ಎನ್3 :  | Kannada Prabha

ಸಾರಾಂಶ

ಇಂದಿಗೂ ಸಮಾಜದಲ್ಲಿ ಅನೇಕ ಮಕ್ಕಳು ವಿವಿಧ ರೀತಿಯ ಶೋಷಣೆ ಮತ್ತು ದುಡಿಮೆಗೆ ಒಳಗಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಲು ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಕರೆ

ಕನ್ನಡಪ್ರಭ ವಾರ್ತೆ ಹಾಸನ

ಬಾಲ್ಯವು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು, ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಭವಿಷ್ಯದಿಂದ ಮಕ್ಕಳನ್ನು ವಂಚಿಸುವ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿಗೂ ಸಮಾಜದಲ್ಲಿ ಅನೇಕ ಮಕ್ಕಳು ವಿವಿಧ ರೀತಿಯ ಶೋಷಣೆ ಮತ್ತು ದುಡಿಮೆಗೆ ಒಳಗಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಬಡತನ, ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಪರಿಸ್ಥಿತಿಯಿಂದ ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ದುಡಿಮೆಗೆ ತಳ್ಳುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ. ಆದರೆ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ, ಆಟವಾಡುವ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕು ಸಂವಿಧಾನ ಮತ್ತು ಕಾನೂನಿನ ಮೂಲಕ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ೧೯೮೬ರಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದೆ. ಆರಂಭದಲ್ಲಿ ೧೪ ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತಿತ್ತು. ಬಳಿಕ ೨೦೧೬ರಲ್ಲಿ ಕಾನೂನಿಗೆ ಮಹತ್ವದ ತಿದ್ದುಪಡಿ ತಂದು, ೧೪ ವರ್ಷದೊಳಗಿನ ಯಾವುದೇ ಮಗುವನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

೧೪ರಿಂದ ೧೮ ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿಯಲ್ಲದ ಕೆಲವು ಉದ್ಯೋಗಗಳಲ್ಲಿ ಮಾತ್ರ ಕಾನೂನಿನ ವ್ಯಾಪ್ತಿಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಅವರ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಹಾಗೂ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಉದ್ಯೋಗದಾತನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಜಾಗೃತಿ ಜಾಥಾವು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಾಲಕಾರ್ಮಿಕ ಪದ್ಧತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮಕ್ಕಳು ಶಾಲೆಯಲ್ಲಿ ಕಲಿಯಬೇಕೇ ಹೊರತು ದುಡಿಮೆಯಲ್ಲಿ ತೊಡಗಬಾರದು ಎಂಬ ಸಂದೇಶವನ್ನು ಜಾಥಾದ ಮೂಲಕ ಸಾರಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ಎಸ್. ಮಧುಕುಮಾರಿ, ಉಪ ಕಾರ್ಮಿಕ ಆಯುಕ್ತ ಎಚ್.ಎಲ್. ಗುರುಪ್ರಸಾದ್, ಕಾರ್ಮಿಕ ಅಧಿಕಾರಿ ಆನಂದರಾಮ್, ರೋಟರಿ ೩೧೮೨ರ ಅಸಿಸ್ಟೆಂಟ್ ರೌರ್‍ನರ್ ಜೆ.ಎನ್. ಮಂಜುನಾಥ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ಎಚ್.ಡಿ. ವಜ್ರಕುಮಾರ್, ಕಾರ್ಯದರ್ಶಿ ಕೆ.ಎಸ್. ಯೋಗೀಶ್, ಹಿರಿಯ ಸದಸ್ಯ ಎಂ.ಸಿ. ರಾಜು, ಬೋದೇಶ್, ಮಿಡ್ ಟೌನ್ ಅಧ್ಯಕ್ಷ ಸಿದ್ದೇಶ್ವರ್, ಯೋಜನಾ ನಿರ್ದೇಶಕಿ ಕನಕಲಕ್ಷ್ಮಿ, ಹಿರಿಯ ಪತ್ರಕರ್ತೆ ಹಾಗೂ ಸದಸ್ಯೆ ಲೀಲಾವತಿ, ಕೆ.ಟಿ. ಜಯಶ್ರೀ, ಕಲಾವಿದ ಬಿ.ಟಿ. ಮಾನವ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂರಿಯಾ ಅಭಾವ ಖಂಡಿಸಿ ರೈತ ಸಂಘ ಪ್ರತಿಭಟನೆ
ನೀಟ್‌ ಅಕ್ರಮ: ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ