ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ ಬಜೆಟ್‌ನಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಅನುಷ್ಠಾನಕ್ಕೆ ಅನುದಾನ ಮೀಸಲಿಟ್ಟು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿ ಜಿಲ್ಲೆಯ ಶಾಸಕರಿಗೆ ಒತ್ತಡ ಹಾಕುವ ನಿಟ್ಟಿನಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಜಿಲ್ಲೆಯ ಎಲ್ಲ ಶಾಸಕರ ನಿವಾಸದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಹಾವೇರಿ, ಬ್ಯಾಡಗಿ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ರೈತರು ಜಮಾವಣೆಗೊಂಡು, ಅಲ್ಲಿಂದ ಬೈಕ್‌ನಲ್ಲಿ ನೇತಾಜಿ ನಗರದಲ್ಲಿರುವ ಹಾವೇರಿ ಶಾಸಕ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಬಸವೇಶ್ವರ ನಗರದಲ್ಲಿರುವ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮನೆ ಎದುರು ಘೋಷಣೆ ಕೂಗಿ ವರದಾ- ಬೇಡ್ತಿ ನದಿ ಜೋಡಣೆ ಜಾರಿಯಾಗಲೇಬೇಕೆಂದು ಆಗ್ರಹಿಸಿದರು. ಬಳಿಕ ಇಬ್ಬರೂ ಶಾಸಕರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ರೈತರು ಸಮಗ್ರ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಬೇಡ್ತಿ- ವರದಾ ನದಿ ಜೋಡಣೆ ಅವಶ್ಯಕವಾಗಿದೆ. ಕೇಂದ್ರ ಸರ್ಕಾರದ ಜಲನೀತಿ ಅನ್ವಯ ವರದಾ- ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸರ್ಕಾರದ ಮುಂದಿದೆ. 2003ರಲ್ಲಿಯೇ ಕೇಂದ್ರದ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಿ ಯೋಜನೆ ಸರಿಯಾಗಿದೆ ಎಂದು ಪ್ರಸ್ತಾಪಿಸಿದೆ. 2011ರಲ್ಲಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸಮಗ್ರ ಯೋಜನಾ ವರದಿ ತಯಾರಿಸಲು ಸೂಚಿಸಿದೆ.ಈ ನದಿ ಜೋಡಣೆಯಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಬೃಹತ್ ಯೋಜನೆಯಾಗಿದೆ. ಇದರಿಂದ ಹಾವೇರಿ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದ್ದು, ಒಟ್ಟು 16 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುವ ಶಕ್ತಿ ಇದಕ್ಕಿದೆ. ಎಲ್ಲ ಪಟ್ಟಣ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸುವ ಶಕ್ತಿಯನ್ನು ಹೊಂದಿದೆ. ಅಂತರ್ಜಲ ಮಟ್ಟವನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದರು.ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದಾಗ ಜಿಲ್ಲೆಯ ಎಲ್ಲ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಸ್ಪಂದಿಸಿ ಯೋಜನೆ ಸಾಕಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಮತ್ತೊಮ್ಮೆ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿಸಿ ಯೋಜನೆ ಅನುಷ್ಠಾನಕ್ಕೆ ಅನುದಾನ ಮೀಸಲಿಟ್ಟು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಯೋಜನೆ ಜಾರಿಯಾಗುವವರೆಗೂ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ನಿರಂತರವಾಗಿ ನಡೆಯುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಶಿದ್ಲಿಂಗಪ್ಪ ಬಳ್ಳಾರಿ, ಮಂಜುನಾಥ ಕದಂ, ರಾಜೇಸಾಬ್ ತರ್ಲಘಟ್ಟ, ಜಾನ್ ಪುನಿತ್, ಸುಭಾಸ್ ಬನ್ನಿಹಟ್ಟಿ, ಶಿವರುದ್ರಪ್ಪ ಮೂಡಿ, ರವಿ ಅಂಗಡಿ, ಮಂಜುನಾಥ ಬನ್ನಿಹಟ್ಟಿ, ಕಲ್ಲಪ್ಪ ಸಣ್ಣಮನಿ, ವಿರುಪಾಕ್ಷಪ್ಪ ಕುರಗೊಡಿ, ಸಂಜೀವ ಬಿಸ್ಟಂಡಿ, ವಿ.ಎಚ್ ಗುಡಗೂರ, ನಂಜುಂಡಸ್ವಾಮಿ, ಬಸಣ್ಣ ಚಂದ್ರಪ್ಪನವರ, ಮಂಜು ಹೇಮನಗೌಡ್ರ ಸೇರಿ ಅನೇಕರ ರೈತರು ಪಾಲ್ಗೊಂಡಿದ್ದರು.ಎಲ್ಲ ಶಾಸಕರ ಮನೆ ಮುಂದೆ ಪ್ರತಿಭಟನೆಜಿಲ್ಲೆಯ ಶಿಗ್ಗಾಂವಿ, ರಾಣಿಬೆನ್ನೂರು, ಹಿರೇಕೆರೂರು ಹಾಗೂ ಹಾನಗಲ್ಲಿನ ಶಾಸಕರ ಮನೆ ಮುಂದೆ ರೈತ ಸಂಘದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ ಬೇಡಿ ವರದಾ ನದಿ ಜೋಡಣೆಗೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.