ರೈತ ಸಂಘದಿಂದ ದಾವಣಗೆರೆಯಲ್ಲಿ 19ಕ್ಕೆ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Nov 18, 2025, 01:15 AM IST
ಫೋಟೋವಿವರ-(16ಎಂಎಂಎಚ್‌4) ಮರಿಯಮ್ಮನಹಳ್ಳಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸರುಸೇನೆ ಹುಚ್ಚವನಹಳ್ಳಿ ಮಂಜುನಾಥ ಬಣದಿಂದ ದಾವಣಗೆರೆಯಲ್ಲಿ ನಡೆಯುವ ಬೃಹತ್‌ ಪ್ರತಿಭಟನಾ ಮೆರವಣಿಗೆಯ ಪೂರ್ವಭಾವಿ ಸಭೆಯಲ್ಲಿ ಕರಪತ್ರಗಳನ್ನು ವಿತರಿಸಿದರು.  | Kannada Prabha

ಸಾರಾಂಶ

ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರೈತರಿಗೆ ಬೆಲೆ ಸಿಗುವವರೆಗೂ ಹೋರಾಟವನ್ನು ನಡೆಸಲಾಗುವುದು

ಮರಿಯಮ್ಮನಹಳ್ಳಿ: ರಾಜ್ಯ ರೈತ ಸಂಘ ಹಾಗೂ ಹಸರುಸೇನೆ ಹುಚ್ಚವನಹಳ್ಳಿ ಮಂಜುನಾಥ ಬಣದಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಕ್ಕಿಜೋಳ ಖರೀದಿ ಕೇಂದ್ರ ತೆರೆಯಲು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯನ್ನು ರೂಪಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ನ.19 ರಂದು ಬುಧವಾರ ಬೆಳಿಗ್ಗೆ 11ಗಂಟೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಪರುಶುರಾಮಪ್ಪ ಹೇಳಿದರು.

ಇಲ್ಲಿನ ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನ.19ರಂದು ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ನೂರಾರು ರೈತರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರೈತರಿಗೆ ಬೆಲೆ ಸಿಗುವವರೆಗೂ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಮೆಕ್ಕಿಜೋಳಕ್ಕೆ ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹2400, ರಾಜ್ಯ ಸರ್ಕಾರ ಬೋನಸ್‌ ಕ್ವಿಂಟಲ್‌ಗೆ ₹1000 ಸೇರಿ ₹3400 ನೀಡಬೇಕು. ಇದೇ ರೀತಿಯಲ್ಲಿ ಸಾಮಾನ್ಯ ಭತ್ತಕ್ಕೆ ಸರ್ಕಾರ ಕ್ವಿಂಟಲ್‌ಗೆ ₹2369 ಮತ್ತು ರಾಜ್ಯ ಸರ್ಕಾರ ಬೋನಸ್ ಕ್ವಿಂಟಲ್‌ಗೆ ₹1000 ಸೇರಿ ₹3369 ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗವುದು ಎಂದು ಅವರು ವಿವರಿಸಿದರು.

ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರು. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ನಡೆಸಲಾಗುವುದು. ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಧರಣಿ ನಡೆಯುವ ಸ್ಥಳಕ್ಕೆ ಬಂದು ರೈತರಿಗೆ ಭರವಸೆ ನೀಡುವವರೆಗೂ ಪ್ರತಿಭಟನೆಯನ್ನುನಡೆಸಲಾಗುವುದು ಎಂದರು.

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯಿಂದ ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವರು. ಇದೇ ರೀತಿಯಲ್ಲಿ ಜಿಲ್ಲೆಯಿಂದ ಸಾಕಷ್ಟು ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿಕೊಂಡರು.

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಲಕನಹಟ್ಟಿ ಬಿ. ಶೇಖಪ್ಪ, ಹಸರುಸೇನೆಯ ಹೋಬಳಿ ಅಧ್ಯಕ್ಷ ಕೆ. ಸಂಪತ್ತು, ರೈತ ಸಂಘದ ಮುಖಂಡರಾದ ಪೀರ್‌ ಸಾಹೇಬ್‌, ಅಯ್ಯನಹಳ್ಳಿ ಪರಮೇಶ್ವರ, ಚಿಲಕನಹಟ್ಟಿ ಸೋಮಣ್ಣ, ಹಾರುವನಹಳ್ಳಿ ಅಂಜಿನಪ್ಪ, ಪಿ. ನಾಗಪ್ಪ, ಮಾರುತಿ, ಎನ್‌. ರಾಜ, ಕೆ. ನಾಗರಾಜ, ರಾಘವೇಂದ್ರ, ಕೆ.ಎಚ್‌. ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಖಾಸಗಿ ಮೈಕ್ರೋ ಫೈನಾನ್ಸಗಳ ಸಾಲ ಮನ್ನಾಕ್ಕೆ ಆಗ್ರಹಿಸಿ ಮನವಿ
ಕಾರ್ಪೆಂಟರ್ಸ್‌ ಸಂಘಟನೆ ಬಲಗೊಳ್ಳಲಿ: ಸಚಿವ ಮಂಕಾಳ ವೈದ್ಯ