ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಗಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರ ಚಳವಳಿ 562ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಹೋರಾಟದದ ಸ್ವರೂಪ ಬದಲಾಗಿದ್ದು, ಸೋಮವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಪೆಂಡಾಲ್‌ಗೆ ಅಡ್ಡಿಪಡಿಸಿದ ಪೋಲಿಸರು:
ಅಕ್ರಮ ಭೂಸ್ವಾಧೀನ ಧೋರಣೆ ಖಂಡಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲು ರಸ್ತೆ ಮಧ್ಯದಲ್ಲಿ ಪೆಂಡಾಲ್ ಹಾಕಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ವಾಗ್ವಾದ ನಡೆದು ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ರೈತರು ಪೆಂಡಾಲ್ ಹಾಕುವುದನ್ನು ಕೈಬಿಟ್ಟು ರಸ್ತೆ ಮಧ್ಯೆದಲೇ ಕುರ್ಚಿಗಳನ್ನು ಹಾಕಿಕೊಂಡು ಕುಳಿತರೆ, ಇನ್ನು ಕೆಲ ರೈತರು ರಸ್ತೆ ಪ್ಲಾಸ್ಟಿಕ್ ಶೀಟ್ ಹಾಸಿ ತಮ್ಮ ಹೋರಾಟ ಪ್ರಾರಂಭಿಸಿದರು. ಸತ್ಯಾಗ್ರಹದಲ್ಲಿ ಭಿತ್ತಿಪತ್ರಗಳ ಜೊತೆಗೆ ಪೊರಕೆ ಹಿಡಿದು ಕುಳಿತಿರುವ ರೈತ ಮಹಿಳೆಯರು ರಾಜ್ಯಸರ್ಕಾರದ ವಿರುದ್ಧ ಕಿಡಿಕಾರಿದರು.
ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಅಲ್ಲದೆ ಬಿಡದಿ-ಹಾರೋಹಳ್ಳಿ ಮಾರ್ಗದಲ್ಲಿ ಸಂಚರಿಸುವ ಜನರು ಹಾಗೂ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ತಾಪಂ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ಕೃಷಿ ಯೋಗ್ಯ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರು ಎಲ್ಲಾ ಮಾದರಿ ಹೋರಾಟ ನಡೆಸಿದರು ಸರ್ಕಾರ ಸ್ಪಂದಿಸುತ್ತಿಲ್ಲ. ನಮ್ಮ ಹೋರಾಟಕ್ಕೆ ರಾಜ್ಯಾದ್ಯಂತ ಎಲ್ಲಾ ರೈತ ಸಂಘಟನೆಗಳು ಬೆಂಬಲಿಸಿದ ನಂತರ ಸರ್ಕಾರ ಬಲವಂತವಾಗಿ ಯಾವುದೇ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಆದರೆ, ಇಲ್ಲಿವರೆಗೆ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಿಲ್ಲ ಎಂದು ದೂರಿದರು.
ಈ ಸಮಿತಿ ಕುರಿತು ಜಿಬಿಡಿಎಗೆ ಯಾವುದೇ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ಕೇವಲ ನಮ್ಮ ಹೋರಾಟದ ಗಮನವನ್ನು ಬೇರೆಡೆ ಸೆಳೆದು ರೈತ ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಹಾಗಾಗಿ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುಲು ಮುಂದಾಗಿದ್ದೇವೆ. ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡಲಿ. ಇಲ್ಲವೇ ನಮ್ಮ ಹೆಣಗಳ ಮೇಲೆ ಯೋಜನೆ ಅನುಷ್ಠಾನಗೊಳಿಸಲಿ. ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹದಲ್ಲಿ ರೈತರು ಮೃತಪಟ್ಟರೆ ಅದಕ್ಕೆ ಸರ್ಕಾರ ಹಾಗೂ ಜಿಬಿಡಿಎ ನೇರ ಹೊಣೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಸಂಯುಕ್ತ ಕಿಸನ್ ಮೋರ್ಚಾದ ರಾಷ್ಟ್ರೀಯ ನಾಯಕರು,
ಭೂ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಶೀನಪ್ಪರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಪ್ರಾಂತ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ರೈತಸಂಘ ಮುಖಂಡರಾದ ಕೆ.ಮಲ್ಲಯ್ಯ, ಕುಮಾರಸ್ವಾಮಿ, ಹೋರಾಟ ಸಮಿತಿ ಪದಾಧಿಕಾರಿಗಳಾದ ಅಶ್ವಥ್, ವೀರಭದ್ರ ಸೇರಿದಂತೆ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದಾರೆ.
ಬೈರಮಂಗಲ ವೃತ್ತದಲ್ಲಿ ಹಾದು ಹೋಗಿರುವ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು.