ಬಂಕಾಪುರ: ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾವೇರಿ ಜಿಲ್ಲೆ ಹಾಗೂ ವಿವಿಧ ರೈತ ಸಂಘಟನೆಗಳು ಶಿಗ್ಗಾಂವಿ ತಾಲೂಕು ಬಂಕಾಪುರ ಬಳಿಯ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಕೈಯಲ್ಲಿನ ಪ್ರತಿಕೃತಿಯನ್ನು ಪೊಲೀಸರು ಕಸಿದುಕೊಂಡು ಅವರಿಗೆ ಸಿಗದಂತೆ ದೂರ ಒಯ್ದು ಬಿಸಾಕಿದರು. ಎರಡನೇ ಭಾರಿ ಇದೇ ತರಹದ ಪ್ರತಿಕೃತಿ ತಯಾರಿಸಿಕೊಂಡು ಬಂದಾಗ ಪೊಲೀಸರು ಮತ್ತೆ ಅದನ್ನು ತಡೆಯಲು ಯತ್ನಿಸಿ ತೆಗೆದುಕೊಂಡು ಹೋದಾಗ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ಉಂಟಾಗಿ ಮಾತಿನ ಚಕಮಕಿ ನಡೆಯಿತು.
ಬಂಕಾಪುರ ಟೋಲ್ ನಾಕಾ ಬಳಿ ಎತ್ತು ಮತ್ತು ಚಕ್ಕಡಿಯನ್ನು ನಿಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡುವೆಯೂ ಆಂಬ್ಯುಲೆನ್ಸ್‌ಗಳಿಗೆ ಅಡ್ಡಿಪಡಿಸದೇ ಓಡಾಡಲು ಅವಕಾಶ ಮಾಡಿಕೊಡುವ ಮುಖಾಂತರ ರೈತರು ಮಾನವೀಯತೆ ಮೆರೆದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸವಣೂರ ಉಪವಿಭಾಗಾಧಿಕಾರಿ ಸಮೀರ್ ಪ್ರಕಾಶ ಖೋಡೆ ಇವರು ಪ್ರತಿಭಟನಾಕಾರರಿಗೆ ಮನವೊಲಿಸಲು ಪ್ರಯತ್ನಿಸಿದಾಗ ತಮ್ಮ ಪ್ರಯತ್ನ ವಿಫಲವಾದದ್ದನ್ನು ಕಂಡು ಶಾಂತರೀತಿಯಿಂದ ಪ್ರತಿಭಟನೆ ನಡೆಸುವಂತೆ ತಿಳಿಸಿ ನಡೆದರು.ರಾಷ್ಟ್ರೀಯ ಹೆದ್ದಾರಿಯ ತಡೆ ಸಿದ್ದತೆ ಅರಿತ ಜಿಲ್ಲಾ ಪೊಲೀಸರು ವಾಹನಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಪ್ರತಿಭಟನಾ ಸ್ಥಳದಲ್ಲಿ 600 ಪೊಲೀಸ್ ಸಿಬ್ಬಂದಿಯನ್ನು ಸೂಕ್ತ ಬಂದೋಬಸ್ತ್‌ಗಾಗಿ ನೇಮಿಸಿದ್ದರು. ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ 1 ಆಂಬ್ಯುಲೆನ್ಸ್ ಹಾಗೂ 1 ಅಗ್ನಿಶಾಮಕ ದಳದ ವಾಹನವನ್ನು ನಿಯೋಜಿಸಲಾಗಿತ್ತು.
ಪರಿತಪಿಸಿದ ಪ್ರಯಾಣಿಕರು: ರೈತರು ಬಂಕಾಪುರ ಟೋಲ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಬಸ್ ಹಾಗೂ ವಿವಿಧ ವಾಹನ ಸವಾರರು ತೀವ್ರ ತೊಂದರೆಯನ್ನು ಅನುಭವಿಸುವಂತಾಯಿತು. ಬಸ್‌ಗಳು ಬಂದರೂ ಹೆದ್ದಾರಿ ಬಂದ್ ಇದ್ದುದರಿಂದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಊರುಗಳಿಗೆ ಹೋಗದೇ ಪರಿತಪಿಸುತ್ತಿರುವುದು ಕಂಡುಬಂದಿತು.