ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಎಂತಹ ಕೆಟ್ಟ ಪರಿಸ್ಥಿತಿ ಎದುರಾದರೂ ಸಹ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸಣ್ಣ ಪುಟ್ಟ ಖರ್ಚುಗಳಿಂದ ಕನಿಷ್ಠ ಪ್ರಮಾಣದಲ್ಲಿ ಜೀವನ ನಡೆಸಲು ಹೈನುಗಾರಿಕೆ ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ರೈತರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರೈತರು ಕೃಷಿ ಜೊತೆಗೆ ಒಂದೆರಡು ಜಾನುವಾರುಗಳನ್ನು ಸಾಕುವುದರಿಂದ ಆತನ ಕುಟುಂಬ ನಿರ್ವಹಣೆಗೆ ಹಣಕಾಸಿನ ನೆರವು ಒದಗಿಸುತ್ತದೆ. ಸರ್ಕಾರ ಕೂಡ ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹ ಧನ ನೀಡುತ್ತಿರುವುದು ರೈತನಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದರು.ಸಹಕಾರ ಸಂಘಗಳು ಸಹಕಾರ ತತ್ವದಡಿ ನಡೆಯುತ್ತಿರುವುದರಿಂದ ಇಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಹಾಲು ಉತ್ಪಾದಕರ ಸಂಘಗಳು ಸದೃಡವಾಗಿ ಉಳಿಯಲು ಗುಣಮಟ್ಟದ ಹಾಲು ಪೂರೈಸುವುದು ಎಲ್ಲಾ ಉತ್ಪಾದಕರ ಕರ್ತವ್ಯವಾಗಿದೆ ಎಂದರು.
ಗ್ರಾಮೀಣ ಪ್ರದೇಶದ ರೈತರು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಶಿಥಿಲೀಕರಿಸಿ ಹಾಲಿನ ಗುಣಮಟ್ಟ ಕಾಪಾಡಲು ತಾಲೂಕಿನಲ್ಲಿ 50ಕ್ಕೂ ಹೆಚ್ಚು ಬಿಎಂಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತು ಜಿಲ್ಲಾ ಹಾಲು ಒಕ್ಕೂಟ ರೈತಪರ ಇದ್ದು, ಹೈನುಗಾರಿಕೆಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಹಳ್ಳಿಗಾಡಿನ ಪ್ರತಿ ಕುಟುಂಬವೂ ಸಹ ಆರ್ಥಿಕ ಭದ್ರತೆಗಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಇದಕ್ಕೂ ಮುನ್ನ ತಾಲೂಕಿನ ಬೆಳ್ಳೂರು ಹೋಬಳಿಯ ಸಣಬ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿದ ಸಚಿವರು, ಹತ್ತು ವರ್ಷ ಕಾಲ ನಾನು ಅಧಿಕಾರದಲ್ಲಿ ಇಲ್ಲದಿದ್ದಾಗ ತಾಲೂಕಿನ ಹಲವು ಗ್ರಾಮಗಳಿಗೆ ರಸ್ತೆ, ಸೇತುವೆ, ಕೆರೆ ತುಂಬಿಸುವ ಯೋಜನೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಆದರೆ, ಇಚ್ಛಾಶಕ್ತಿ ಇಲ್ಲದವರು ನನ್ನ ಅವಧಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಸಹಿಸುತ್ತಿಲ್ಲ. ಊರಿನ ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರು ತಕರಾರು ಮಾಡುವುದನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮನ್‌ಮುಲ್ ನಿದೇರ್ಶಕ ಲಕ್ಷ್ಮೀನಾರಾಯಣ, ಸಂಘದ ಅಧ್ಯಕ್ಷೆ ಡಿ.ಎಚ್.ನೇತ್ರಾವತಿ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಪುತ್ರ ಚೇತನ್‌ಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಎನ್.ಟಿ.ಕೃಷ್ಣಮೂರ್ತಿ, ಸುರೇಂದ್ರ, ಮುಖಂಡರಾದ ಮುಖಂಡರಾದ ಮಂಜೇಶ್, ಶ್ರೀನಿವಾಸ್, ಪ್ರಜ್ವಲ್, ಪಾಪಣ್ಣ, ವೆಂಕಟೇಶ್, ದಿನೇಶ್ ಸೇರಿದಂತೆ ಮನ್ಮುಲ್ ಅಧಿಕಾರಿಗಳು ಇದ್ದರು.