ಡಾ.ಶ್ರೀನಿವಾಸ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ: ಮಂಡ್ಯ ರಮೇಶ್

KannadaprabhaNewsNetwork |  
Published : Nov 28, 2025, 01:30 AM IST
27ಕೆಎಂಎನ್ ಡಿ13 | Kannada Prabha

ಸಾರಾಂಶ

ಡಾ.ಶ್ರೀನಿವಾಸ್ ನೀನಾಸಂ ತಿರುಗಾಟ ಸೇರಿದಂತೆ ಹಲವು ನಾಟಕಗಳನ್ನು ಪಾಂಡವಪುರಕ್ಕೆ ಪರಿಚಯಿಸಿದ್ದರು. ನನಗೆ ಅವರು ವೈದ್ಯರು ಎಂದೇ ಗೊತ್ತಿರಲಿಲ್ಲ. ಪ್ರತಿಯೊಬ್ಬರ ಸಾವು ನಿಗೂಢವಾಗಿರುತ್ತವೆ. ಕೆಲವು ಕಾಣುತ್ತವೆ. ಆದರೆ, ಇನ್ನೂ ಕೆಲವು ಸಾವುಗಳು ವರ್ಷಗಳು ಕಳೆಯುತ್ತಿದ್ದರೂ ಮಾತನಾಡುತ್ತಿರುತ್ತವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದ ಡಾ.ಶ್ರೀನಿವಾಸ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿ ಪ್ರತಿ ವರ್ಷ ಕಾರ್ಯಕ್ರಮ ರೂಪಿಸಬೇಕು ಎಂದು ಚಿತ್ರನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಸಲಹೆ ನೀಡಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ರಾಯಭಾರಿ ಡಾ.ಕೆ.ವೈ.ಶ್ರೀನಿವಾಸ್‌ ಅವರಿಗೆ ಆಯೋಜಿಸಿದ್ದ ನುಡಿ-ನಮನದಲ್ಲಿ ಮಾತನಾಡಿ, ಡಾ.ಶ್ರೀನಿವಾಸ್ ಅವರು ಕೇವಲ ಬಿಳಿ ಕಾಲರಿನ ವೈದ್ಯರಾಗಿರಲಿಲ್ಲ. ಅವರಲ್ಲಿ ಮಾನವೀಯತೆಯ ಗುಣವಿತ್ತು. ಅವರೊಬ್ಬ ಒಳ್ಳೆಯ ಮನುಷ್ಯರಾಗಿದ್ದರು ಎಂದರು.

ಡಾ.ಶ್ರೀನಿವಾಸ್ ನೀನಾಸಂ ತಿರುಗಾಟ ಸೇರಿದಂತೆ ಹಲವು ನಾಟಕಗಳನ್ನು ಪಾಂಡವಪುರಕ್ಕೆ ಪರಿಚಯಿಸಿದ್ದರು. ನನಗೆ ಅವರು ವೈದ್ಯರು ಎಂದೇ ಗೊತ್ತಿರಲಿಲ್ಲ. ಪ್ರತಿಯೊಬ್ಬರ ಸಾವು ನಿಗೂಢವಾಗಿರುತ್ತವೆ. ಕೆಲವು ಕಾಣುತ್ತವೆ. ಆದರೆ, ಇನ್ನೂ ಕೆಲವು ಸಾವುಗಳು ವರ್ಷಗಳು ಕಳೆಯುತ್ತಿದ್ದರೂ ಮಾತನಾಡುತ್ತಿರುತ್ತವೆ. ಹೀಗಾಗಿ ಡಾ.ಶ್ರೀನಿವಾಸ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಪ್ರತಿ ವರ್ಷ ಕಾರ್ಯಕ್ರಮ ರೂಪಿಸಬೇಕು ಎಂದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಕ್ರೀಡೆ, ಸಂಸ್ಕೃತಿ, ಸಾಹಿತ್ಯ, ಸಮಾಜ ಸೇವೆ, ಸಂಘಟನೆ ಸೇರಿದಂತೆ ಇತರೆ ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದ ಡಾ.ಕೆ.ವೈ.ಶ್ರೀನಿವಾಸ್ ಅವರು ಸಂಶೋಧಕರಾಗಿದ್ದರು ಎಂದು ಬಣ್ಣಿಸಿದರು.

ಡಾ.ಶ್ರೀನಿವಾಸ್ ಎಲ್ಲ ವಿಚಾರಗಳಲ್ಲೂ ಹೊಸ ಶೋಧನೆ ಹಾಗೂ ಸಂಶೋಧನೆ ನಡೆಸುವ ಮೂಲಕ ಸಮಾಜಕ್ಕೆ ಏನಾದರೂ ಬಳುವಳಿ ಕೊಡಬೇಕೆಂದು ಕೆಲಸ ಮಾಡುತ್ತಿದ್ದರು. ಸಂಘಜೀವಿ, ಸಮಾಜ ಜೀವಿ ಎಂಬ ಮಾತಿಗೆ ಅನ್ವರ್ಥತೆಯನ್ನು ಸೃಷ್ಟಿ ಮಾಡಿದವರು. ದಿನದ 24 ಗಂಟೆಯೂ ಸಾರ್ವಜನಿಕ ಕೆಲಸ ಮಾಡುತ್ತಿದ್ದ ಅವರೊಬ್ಬ ಸಾಂಸ್ಕೃತಿಕ ಆಸ್ತಿಯಾಗಿದ್ದರು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕ್ಯಾತನಹಳ್ಳಿ ಗ್ರಾಮದಲ್ಲಿ ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಡಾ.ಕೆ.ವೈ.ಶ್ರೀನಿವಾಸ್ ಅವರು ಇಲ್ಲದಿದ್ದರೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳು ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಾ.ಕೆ.ವೈ.ಶ್ರೀನಿವಾಸ್ ಅವರ ಒಡನಾಡಿಗಳಾದ ಜಾನಪದ ವಿದ್ವಾಂಸ ಡಾ.ಕ್ಯಾತನಹಳ್ಳಿ ರಾಮಣ್ಣ, ಹಾಸ್ಯ ಕಲಾವಿದ ದೊಡ್ಡೇಗೌಡನಕೊಪ್ಪಲು ಚಂದ್ರಪ್ರಭಾ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಕನ್ನಡ ಉಪನ್ಯಾಸಕಿ ಜಿ.ಉಷಾರಾಣಿ, ವಕೀಲ ಎಂ.ಮುರಳೀಧರ್, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಹರಳಹಳ್ಳಿ ಶಿವಲಿಂಗೇಗೌಡ, ಸೇರಿದಂತೆ ಹಲವರು ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಬಿ.ಎಸ್. ನಾಗಲಿಂಗೇಗೌಡ, ತಾಲೂಕು ಕಸಾಪ ಅಧ್ಯಕ್ಷ ಮೇನಾಗ್ರ ಪ್ರಕಾಶ್, ದಿ.ಡಾ.ಕೆ.ವೈ.ಶ್ರೀನಿವಾಸ್ ಅವರ ಪತ್ನಿ ಪುಷ್ಪಾ, ಪುತ್ರ ಡಾ.ಕೆ.ಎಸ್.ಅಭಿನಯ್ ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ