ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸ್ತುತ ವರ್ಷವೂ ಸಹ ತಾಲೂಕಿನಾದ್ಯಂತ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಬೆಳೆದ ಬಹುತೇಕ ಎಲ್ಲಾ ಬೆಳೆಗಳು ಮಣ್ಣುಪಾಲಾಗಿದ್ದು, ರೈತ ಸಮುದಾಯ ಈ ಬಾರಿ ಹೆಚ್ಚಿನ ನಷ್ಟ ಅನುಭವಿಸುತ್ತಿದೆ. ರೈತರ ನಷ್ಟದ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ವರದಿ ನೀಡಿ ಮಧ್ಯಂತರ ಪರಿಹಾರವನ್ನು ಆದಷ್ಟು ಬೇಗ ರೈತ ಸಮುದಾಯಕ್ಕೆ ನೀಡುವ ನಿಟ್ಟಿನಲ್ಲಿ ವಿವಿಧ ರೈತ ಸಂಘಟನೆಗಳೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ವಿಶೇಷವಾಗಿ ಕಳೆದ ಮೂರು ತಿಂಗಳಿಂದ ತಾಲೂಕಿನ ಯಾವುದೇ ಭಾಗದಲ್ಲೂ ಮಳೆಯಾಗಿಲ್ಲ. ರೈತರು ಬಿತ್ತನೆಮಾಡಿದ ಎಲ್ಲಾ ಬೆಳೆ ನೆಲಕಚ್ಚಿವೆ. ವಿಶೇಷವಾಗಿ ಶೇಂಗಾ, ಈರುಳ್ಳಿ, ಟೊಮೆಟೋ, ತೊಗರಿ, ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ಪರಿಹಾರವನ್ನು ನೀಡುವಂತೆ ನಿರಂತರವಾಗಿ ಮನವಿ ಮೂಲಕ ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದ್ಧಾರೆ. ಈ ನಿಟ್ಟಿನಲ್ಲಿ ಸರ್ಕಾರ ಸೂಚನೆಯಂತೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಹಯೋಗದೊಂದಿಗೆ ವರದಿಯನ್ನು ಸಿದ್ದಪಡಿಸಿದ್ದು ರೈತರಿಗೆ ಮಧ್ಯಂತರ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಕಾಯೋನ್ಮುಖವಾಗಲಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಆರಂಭದಲ್ಲಿ ಉತ್ತಮ ಮಳೆಯಾಗಿದ್ದು, ಶೇ.80 ರಷ್ಟು ಬಿತ್ತನೆ ದಾಖಲಾಗಿತ್ತು. ಆದರೆ ದಿಢೀರನೆ ಎಲ್ಲೆಡೆ ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ ಬೆಳೆಎಲ್ಲಾ ಭೂಮಿಯಲ್ಲಿ ಅಡಗಿಹೋಗಿದೆ. ಎಲ್ಲಿ ಹೋದರೂ ರೈತರು ಬೆಳೆ ಪರಿಹಾರದ ಬಗ್ಗೆ ಒತ್ತಾಯ ಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಹ ವರದಿ ನೀಡುವಂತೆ ನಿರ್ದೇಶನ ನೀಡಿದ್ದು ಅಧಿಕಾರಿಗಳ ಸಮಕ್ಷಮದಲ್ಲಿ ಮಧ್ಯಂತರ ಪರಿಹಾರ ನೀಡಲು ಸರ್ಕಾರಕ್ಕೆ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದರು.ರೈತ ಸಂಘದ ಹಿರಿಯ ಮುಖಂಡ ಅಖಂಡ ಕರ್ನಾಟಕ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಕಳೆದ ವರ್ಷವೂ ಸಹ ಕೆಲವು ಖಾಸಗಿ ಬೆಳೆವಿಮೆ ಕಂಪನಿಗಳು ರೈತರಿಗೆ ಪರಿಹಾರ ನೀಡದೆ ವಂಚಿಸಿವೆ. ಸರ್ಕಾರ ಖಾಸಗಿ ಕಂಪನಿಗಳಿಗೆ ಪರಿಹಾರ ನೀಡುವ ಜವಾಬ್ದಾರಿ ನೀಡಿದರೆ ಕಂಪನಿಗಳು ರೈತರಿಗೆ ಸಕರಾತ್ಮಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತವೆ. ಇದರಿಂದ ರೈತರ ಬದುಕು ಅಧೋಗತಿಯತ್ತ ಸಾಗಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪುಟ್ಟಣ್ಣ ಯ್ಯಬಣದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಿಕ್ಕಣ್ಣ, ತಾಲೂಕು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಶಿವಲಿಂಗಪ್ಪ, ರೈತರಿಗೆ ಯಾವುದೇ ಸೂಕ್ತ ಮಾಹಿತಿ ನೀಡದೆ ಅಧಿಕಾರಿ ವರ್ಗ ವರದಿಯನ್ನು ಸಿದ್ಧಪಡಿಸಿರುವುದು ಸರಿಯಲ್ಲ. ತಾಲೂಕಿನ ಎಲ್ಲಾ ರೈತರಿಗೂ ಬೆಳೆನಷ್ಟದ ಪರಿಹಾರವನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ರೈತರು ಸ್ವತಂತ್ರ್ಯವಾಗಿ ಬದುಕಲು ಅವಕಾಶ ಮಾಡಿಕೊಡಬೇಕಿದೆ. ರಾಜ್ಯ ಸರ್ಕಾರ ಯಾವುದೇ ಅಧಿಕಾರಿ, ಸಚಿವರು ರೈತರ ಪರವಾಗಿ ಧ್ವನಿಎತ್ತದೆ ಇರುವುದು ನೋವಿನ ಸಂಗತಿ ಎಂದರು.
ಈ ವೇಳೆ ತೋಟಗಾರಿಕೆ ಅಧಿಕಾರಿ ಎಲ್.ಕುಮಾರ್, ಕೃಷಿ ಅಧಿಕಾರಿಗಳಾದ ಜೀವನ್, ಮಂಜುನಾಥ, ವಿಮಾ ಕಂಪನಿ ನಿರ್ದೇಶಕ ರಾಜಶೇಖರ್, ರೈತ ಮುಖಂಡರಾದ ನಾಗರಾಜು, ಚನ್ನಕೇಶವ ಮೂರ್ತಿ, ತಿಪ್ಪೇಸ್ವಾಮಿ, ಹನುಮಂತಪ್ಪ ಮುಂತಾದವರು ಭಾಗವಹಿಸಿದ್ದರು.