ಮೊತ್ತಹಳ್ಳಿಯ ಕುಮಾರ್ ಅವರಿಗೆ ಸೇರಿದ 30 ಗುಂಟೆ ಬೀನ್ಸ್, ಸುನೀಲ್ ಅವರಿಗೆ ಸೇರಿದ ಒಂದುವರೆ ಎಕರೆ ಬಾಳೆ ತೋಟ, ಪ್ರದೀಪ್ ಅವರಿಗೆ ಸೇರಿದ 30 ಗುಂಟೆ ಟಮೋಟಾ, ಕಟ್ಟೆ ಸಿದ್ದ ಅವರಿಗೆ ಸೇರಿದ 20 ಗುಂಟೆ ಕಬ್ಬು, ಕುಮಾರ್ ಅವರಿಗೆ ಸೇರಿದ ಹಾಗಲಕಾಯಿ ಮಡಿಯನ್ನು ತುಳಿದು ನಾಶ ಮಾಡಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಎರಡು ಕಾಡಾನೆಗಳ ದಾಳಿಯಿಂದ ತಾಲೂಕಿನ ಮೊತ್ತಹಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ರೈತರು ಬೆಳೆದಿದ್ದ ಬೆಳೆಗಳು ನಾಶವಾಗಿವೆ.
ಮೊತ್ತಹಳ್ಳಿಯ ಕುಮಾರ್ ಅವರಿಗೆ ಸೇರಿದ 30 ಗುಂಟೆ ಬೀನ್ಸ್, ಸುನೀಲ್ ಅವರಿಗೆ ಸೇರಿದ ಒಂದುವರೆ ಎಕರೆ ಬಾಳೆ ತೋಟ, ಪ್ರದೀಪ್ ಅವರಿಗೆ ಸೇರಿದ 30 ಗುಂಟೆ ಟಮೋಟಾ, ಕಟ್ಟೆ ಸಿದ್ದ ಅವರಿಗೆ ಸೇರಿದ 20 ಗುಂಟೆ ಕಬ್ಬು, ಕುಮಾರ್ ಅವರಿಗೆ ಸೇರಿದ ಹಾಗಲಕಾಯಿ ಮಡಿಯನ್ನು ತುಳಿದು ನಾಶ ಮಾಡಿವೆ.
ರೈತರ ಬೆಳೆಗಳ ನಾಶರಿಂದ ಲಕ್ಷಾಂತರ ರು. ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಷ್ಟಕ್ಕೊಳಗಾದವರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಶನಿವಾರ ರಾತ್ರಿ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಆನೆಗಳು ರೈತರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟು ನಾಶ ಮಾಡಿವೆ. ನಂತರ ತಡರಾತ್ರಿ ಮಂಡ್ಯ ತಾಲೂಕಿನ ಮೊತ್ತಹಳ್ಳಿಯ ರೈತ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದ್ದು, ನಾಶ ಮಾಡಿರುವ ಬೆಳೆಗಳನ್ನು ನೋಡಿ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಮದ್ದೂರು, ಭಾರತೀನಗರ, ಮಳವಳ್ಳಿ ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಕಾಡಾನೆಗಳು ರೈತರ ಜಮೀನುಗಳ ಮೇಲೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದು, ಈಗ ಮಂಡ್ಯ - ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲೂ ಬೆಳೆಗಳನ್ನು ನಾಶ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ. ಕಾಡಾನೆಗಳ ನಿಯಂತ್ರಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಆದಷ್ಟು ಬೇಗ ಕಾಡಾನೆಗಳ ಸೆರೆಗೆ ಮುಂದಾಗಿ ರೈತರ ಬೆಳೆ ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.