ಸವಣೂರು: ಶಾಸಕರ ಆಗಮನಕ್ಕಾಗಿ ರೈತರು ಕಾಯ್ದು ಕಾಯ್ದು ಸುಸ್ತಾಗಿ ರೈತ ದಿನಾಚರಣೆಯನ್ನು ಧಿಕ್ಕರಿಸಿ ಸಭಾ ವೇದಿಕೆಯಿಂದ ಹೊರ ನಡೆದ ಘಟನೆ ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ದಿನಾಚರಣೆ ಸಮಾರಂಭದಲ್ಲಿ ಜರುಗಿತು. ಕಾರ್ಯಕ್ರಮವು ನಿಗದಿತ ಸಮಯಕ್ಕಿಂತಲೂ ಎರಡು ಗಂಟೆ ವಿಳಂಬವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು, ಶಾಸಕ ಯಾಸೀರಖಾನ್ ಪಠಾಣ ಅವರು ಬಂದರೇಷ್ಟು, ಬಿಟ್ಟರೇಷ್ಟು, ಇದು ನಮ್ಮ ಕಾರ್ಯಕ್ರಮ ಕೂಡಲೇ ಕಾರ್ಯಕ್ರಮವನ್ನು ಉದ್ಘಾಟಿಸಲು ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಶಾಸಕರ ಆಗಮನ ನಂತರ ಉದ್ಘಾಟಿಸೋಣ ಎಂದು ರೈತರಿಗೆ ಮನವಿ ಮಾಡಿದರು. ಇದು ರೈತರ ದಿನಾಚರಣೆ ಶಾಸಕರ ದಿನಾಚರಣೆ ಅಲ್ಲ. ಕಳೆದ ಬಾರಿಯೂ ಸಹ ಇದೇ ರೀತಿ ರೈತರಿಗೆ ಅಪಮಾನ ಮಾಡಲಾಗಿತ್ತು. ಈ ಬಾರಿಯೂ ಸಹ ನಿಗದಿತ ಸಮಯಕ್ಕೆ ರೈತ ದಿನಾಚರಣೆ ಕಾರ್ಯಕ್ರಮವನ್ನು ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಿ ಪುನಃ ರೈತರಿಗೆ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ಹಾಗೂ ಶಾಸಕರ ಆಡಳಿತ ವೈಖರಿಯನ್ನು ಖಂಡಿಸಿ ವೇದಿಕೆಯಿಂದ ಹೊರ ನಡೆದರು. ಈ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ರೈತರ ಮನವೊಲಿಸಿ ರೈತರಿಂದಲೇ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಶಾಸಕ ಯಾಸೀರಖಾನ್ ಪಠಾಣ ಆಗಮಿಸಿ ಮಾತನಾಡಿ, ತಡವಾಗಿ ಬಂದಿರುವುದಕ್ಕೆ ರೈತ ಮುಖಂಡರಲ್ಲಿ ಕ್ಷಮೆಯಾಚಿಸಿದರು. ಹಾವೇರಿ ಜಿಲ್ಲೆಯಲ್ಲಿ ಅಂದಾಜು ಬೆಳಗಿಂತ ಹೆಚ್ಚಿನ ಪಸಲು ಬಂದಿರುವುದರಿಂದ ಜಿಲ್ಲೆಯಲ್ಲಿ 20,000 ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿತ್ತು. ಆದರೆ, ಕೆಎಂಎಫ್‌ನ ಕೋಟಾ ಮುಗಿದ ಹಿನ್ನೆಲೆಯಲ್ಲಿ ಯಾವ ಪ್ರದೇಶದಲ್ಲಿ ಬೆಳೆ ಬೆಳೆದಿಲ್ಲ ಅಂತಹ ವಿವಿಧ ಪ್ರದೇಶಗಳಿಗೆ ಶಿಕಾರಿಪುರಕ್ಕೆ ಕೊಂಡೊಯ್ಯಲು ತಿಳಿಸಲಾಗಿತ್ತು. ಇದಕ್ಕೆ ರೈತರು ಒಪ್ಪಿರಲಿಲ್ಲ. ಆದ್ದರಿಂದ, ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಬೇಗ ಸ್ಥಗಿತಗೊಂಡಿರುವ ಗೋವಿನಜೋಳ ಖರೀದಿ ಕೇಂದ್ರವನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು. ರೈತರಲ್ಲಿರುವ ಎಲ್ಲ ಗೋವಿನಜೋಳವನ್ನು ಖರೀದಿಸಲು ಸರ್ಕಾರಕ್ಕೆ ಒತ್ತಡ ಹೇರಲಾಗುವದು ಎಂದು ಭರವಸೆಯನ್ನು ನೀಡಿದರು.
ರೈತರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಲು ಇತ್ತೀಚೆಗೆ ನಡೆದ ಸದನದಲ್ಲಿ ವರದಾ ಬೇಡ್ತಿ ನದಿ ಜೋಡಣೆಯನ್ನು ಕೈಗೊಳ್ಳಲು ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವರಿಗೆ, ಸಂಸದರಿಗೆ ಪಕ್ಷಾತೀತವಾಗಿ ಬೆಂಬಲಿಸಲು ಮನವಿ ಮಾಡಲಾಗಿದೆ ಎಂದು ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಹೇಳಿದರು.