ನಾರಾಯಣ ಹೆಗಡೆ
ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಹಲವು ಉಪಕ್ರಮ ಕೈಗೊಳ್ಳುತ್ತಿದ್ದರೂ ಈ ಸಲ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಹೊರಟಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಯಜ್ಞದ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಸಿಲೆಬಸ್ ಪೂರ್ಣಗೊಳಿಸಲಾಗಿದ್ದು, ಪರೀಕ್ಷಾ ಪೂರ್ವಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ ಶೇ.69ರಷ್ಟು ಫಲಿತಾಂಶದೊಂದಿಗೆ 15ನೇ ಸ್ಥಾನದಲ್ಲಿದ್ದ ಹಾವೇರಿ ಜಿಲ್ಲೆ ಈ ಸಲ ಸಿಂಗಲ್ ಡಿಜಿಟ್‌ನೊಳಗೆ ಬರುವಂತೆ ಮಾಡುವ ಗುರಿಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.
ಏನಿದು ಮಿಶನ್ 40 ಪ್ಲಸ್?: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗುವವರ ಸಂಖ್ಯೆಯನ್ನು ಕಡಿಮೆಗೊಳಿಸಿದರೆ ಸಹಜವಾಗಿಯೇ ಫಲಿತಾಂಶ ಸುಧಾರಿಸುತ್ತದೆ. ಅದಕ್ಕಾಗಿ ವಿಶೇಷವಾಗಿ ನಿಧಾನ ಕಲಿಕಾ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಿ ಅವರು ಪ್ರತಿ ವಿಷಯದಲ್ಲಿ ಕನಿಷ್ಠ 40 ಅಂಕ ಪಡೆಯುವಂತೆ ಮಾಡುವ ಕಾರ್ಯಕ್ರಮವೇ ಮಿಶನ್ 40 ಪ್ಲಸ್. ಅದಕ್ಕಾಗಿ ವಿಶೇಷ ಕ್ರಿಯಾಯೋಜನೆ ತಯಾರಿಸಿಕೊಂಡು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಪಾಠಗಳ ಪುನರಾವರ್ತನೆ, ಪ್ರಶ್ನೆ ಪತ್ರಿಕೆ ಬಿಡಿಸುವುದು, ಪ್ರತಿ ಪಾಠದ ಪರೀಕ್ಷೆ, ರಸಪ್ರಶ್ನೆ ನಡೆಸಲಾಗುತ್ತಿದೆ. ಶಾಲೆಗೆ ಗೈರಾಗುವುದನ್ನು ತಪ್ಪಿಸುವುದು, ಅಂತಹ ಮಕ್ಕಳಿಗೆ ಪ್ರೇರಣೆ ಮತ್ತು ಧೈರ್ಯ ತುಂಬುವುದು ಸೇರಿದಂತೆ ಯಾವ ಮಗುವೂ ಫೇಲ್ ಆಗದ ರೀತಿಯಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಶಿಕ್ಷಕರು ಹಗಲಿರುಳು ಶ್ರಮಿಸುತ್ತಿದ್ದಾರೆ.ಬಡ್ಡಿ ಪೇರಿಂಗ್-ಕಲಿಕೆಯಲ್ಲಿ ಹಿಂದುಳಿದವರ ಪ್ರಗತಿಗಾಗಿ ಬಡ್ಡಿ ಪೇರಿಂಗ್ ಎಂಬ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ಕಲಿಕೆಯಲ್ಲಿ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಬಡ್ಡಿ ಪೇರಿಂಗ್ (ಜಾಣರ ಜೋಡಿ) ಮಾಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ಮಾಡಿಕೊಂಡು ಪ್ರತಿ ಮಗುವಿನ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಅಂತಹ ಮಕ್ಕಳು ಮತ್ತು ಪಾಲಕರಿಗೆ ಬೆಳಗ್ಗೆ 5 ಗಂಟೆಗೆ ವೇಕ್‌ಅಪ್ ಕಾಲ್ ಮಾಡಲಾಗುತ್ತಿದೆ. ಪ್ರತಿ ಮಗುವಿಗೆ ವಿಷಯವಾರು ತರಬೇತಿ, ಇಲಾಖೆಯಿಂದ ನೀಡಿರುವ ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್ ತೆಗೆದು, ಯಾವ ರೀತಿ ಪ್ರಶ್ನೆ ಬೀಳುತ್ತದೆ? ಯಾವ ಪಾಠದ ಮೇಲೆ ಎಷ್ಟು ಅಂಕಗಳ ಪ್ರಶ್ನೆ ಬರುತ್ತದೆ ಎಂಬುದನ್ನು ತಿಳಿಸಲಾಗುತ್ತಿದೆ. ಅದಕ್ಕಾಗಿ ಶಿಕ್ಷಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
3 ಸಲ ಮೂರು ಪ್ರಿಪರೇಟರಿ ಪರೀಕ್ಷೆ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಆದರೆ, ಈ ಸಲ 3 ಪ್ರಿಪರೇಟರಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಬರಲಿದೆ. ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಸಾಧನೆ ಮೌಲ್ಯಮಾಪನ ನಡೆಸಿ, ಕಡಿಮೆ ಅಂಕ ಪಡೆದವರ ಮೇಲೆ ಗಮನವನ್ನು ಇನ್ನಷ್ಟು ಕೇಂದ್ರೀಕರಿಸಲಾಗುತ್ತಿದೆ. ಅಂತಿಮವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಉತ್ತೀರ್ಣರಾಗಬೇಕು ಎಂಬ ನಿಟ್ಟಿನಲ್ಲಿ ಚಟುವಟಿಕೆ ನಡೆಸಲಾಗುತ್ತಿದೆ.ಜಾತ್ರೆ, ಉತ್ಸವಕ್ಕೆ ಹೋಗದಂತೆ ಕ್ರಮ:ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬ, ಜಾತ್ರೆ, ಉತ್ಸವಗಳು ಈಗ ಎಲ್ಲೆಡೆ ಶುರುವಾಗಿದೆ. ಪೋಷಕರು ಮಕ್ಕಳನ್ನೂ ಕರೆದೊಯ್ಯುವುದರಿಂದ ಅವರ ಪರೀಕ್ಷಾ ತಯಾರಿಗೆ ತೊಂದರೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾತ್ರೆ, ಉತ್ಸವಕ್ಕೆ ಮಕ್ಕಳು ಹೋಗುವುದನ್ನು ತಪ್ಪಿಸಲು ಅದೇ ದಿನ ವಿಶೇಷ ಸಭೆ, ಪರೀಕ್ಷೆಗಳನ್ನು ಶಿಕ್ಷಕರು ನಡೆಸುತ್ತಿದ್ದಾರೆ. ಮಕ್ಕಳ ಗಮನ ಬೇರೆಡೆ ಹೋಗದಂತೆ ಶಿಕ್ಷಕರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅಲ್ಲದೇ, ಮಕ್ಕಳ ಆರೋಗ್ಯದ ಬಗ್ಗೆ ಕೂಡ ನಿಗಾ ವಹಿಸಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಕಡಿಮೆ ಫಲಿತಾಂಶ ಬರುವ ಶಾಲೆಗಳ ಶಿಕ್ಷಕರಿಗೆ ಫಲಿತಾಂಶ ಹೆಚ್ಚಳದ ಗುರಿ ನಿಗದಿ ಮಾಡಿದ್ದೇವೆ. ಎಲ್ಲ ಕೆಪಿಎಸ್ ಶಾಲೆಗಳಲ್ಲಿ ಕಳೆದ ಸಲಕ್ಕಿಂತ ಶೇ.20ರಷ್ಟು ಪರ್ಸೆಂಟ್ ಹೆಚ್ಚು ಬರಬೇಕು ಎಂದು ಟಾರ್ಗೆಟ್ ಕೊಟ್ಟು ನೋಡೆಲ್ ಅಧಿಕಾರಿಗಳನ್ನು ನೇಮಿಸಿದ್ದೇವೆ. ಪ್ರೇರಣಾತ್ಮಕ ಕಾರ್ಯಾಗಾರ ಆಯೋಜಿಸಿ ತಜ್ಞರಿಂದ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗೂಗಲ್ ಮೀಟ್ ಮೂಲಕ ಶಾಲೆಗೆ ಗೈರಾಗುವ ಮಕ್ಕಳ ಪಾಲಕರೊಂದಿಗೆ ತಾಲೂಕುವಾರು ಸಭೆ ನಡೆಸುತ್ತಿದ್ದೇನೆ. ಈ ಸಲ ಫಲಿತಾಂಶ ಸುಧಾರಣೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ ಎಂದು ಹಾವೇರಿ ಜಿಪಂ ಸಿಇಒ ರುಚಿ ಬಿಂದಲ್ ಹೇಳಿದರು.