ಇದರಿಂದ ಸಿಟ್ಟಿಗೆದ್ದ ಧರಣಿ ನಿರತ ರೈತರು, ಕಬ್ಬಿಗೆ ಕನಿಷ್ಠ ಪ್ರತಿ ಟನ್ ಗೆ ₹5,500 ನಿಗದಿ ಸೇರಿದಂತೆ ಬೇಡಿಕೆ ಈಡೇರುವವರೆಗೆ ಸಕ್ಕರೆ ದಾಸ್ತಾನು ಸಾಗಾಣಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಗೋದಾಮು ಆವರಣದಲ್ಲಿದ್ದ ಲಾರಿಗಳನ್ನು ರೈತ ಮುಖಂಡರು ಹೊರಗೆ ಕಳುಹಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವವರೆಗೆ ಕಾರ್ಖಾನೆ ಸಕ್ಕರೆ ಮಾರಾಟ ಮಾಡಬಾರದು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ, ರೈತ ಸಂಘದ ಕಾರ್ಯಕರ್ತರು ಗುರುವಾರ ತಾಲೂಕಿನ ಕೊಪ್ಪದ ಎನ್ಎಸ್ ಎಲ್ ಸಕ್ಕರೆ ಕಾರ್ಖಾನೆ ಗೋದಾಮಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಸಂಘದ ಕೊಪ್ಪ, ಕೆಸ್ತೂರು ಹಾಗೂ ಬೆಸಗರಹಳ್ಳಿ ಘಟಕದ ಕಾರ್ಯಕರ್ತರು ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಸೇರಿದ ಮೂರು ಸಕ್ಕರೆ ಗೋದಾಮಿಗೆ ಮುತ್ತಿಗೆ ಹಾಕಿ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಖಾನೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಅವರು ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲು ಮುಂದಾದರು. ಗೋದಾಮಿನ ಸಕ್ಕರೆ ದಾಸ್ತಾನು ಲಾರಿಗಳ ಮೂಲಕ ಸಾಗಾಣಿಕೆ ಮಾಡಿ ಮಾರಾಟ ಮಾಡಿದ ನಂತರ ರೈತರಿಗೆ ಬಾಕಿ ಹಣ ಪಾವತಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಇದರಿಂದ ಸಿಟ್ಟಿಗೆದ್ದ ಧರಣಿ ನಿರತ ರೈತರು, ಕಬ್ಬಿಗೆ ಕನಿಷ್ಠ ಪ್ರತಿ ಟನ್ ಗೆ ₹5,500 ನಿಗದಿ ಸೇರಿದಂತೆ ಬೇಡಿಕೆ ಈಡೇರುವವರೆಗೆ ಸಕ್ಕರೆ ದಾಸ್ತಾನು ಸಾಗಾಣಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಗೋದಾಮು ಆವರಣದಲ್ಲಿದ್ದ ಲಾರಿಗಳನ್ನು ರೈತ ಮುಖಂಡರು ಹೊರಗೆ ಕಳುಹಿಸಿದರು.
ಪ್ರತಿಭಟನಾ ರೈತರ ಆಕ್ರೋಶಕ್ಕೆ ಮಣಿದ ಕಾರ್ಖಾನೆ ಅಧಿಕಾರಿಗಳು ರೈತರ ಸಮ್ಮುಖದಲ್ಲಿಯೇ ಗೋದಾಮುಗಳಿಗೆ ಬೀಗ ಹಾಕಿ ಕೀಗಳನ್ನು ವಶಕ್ಕೆ ಪಡೆದುಕೊಂಡರು. ನಂತರ ರೈತ ಮುಖಂಡರ ಸಭೆ ನಡೆಸಿದ ಅಧಿಕಾರಿಗಳು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆ ಆಲಿಸಲು ಕೇಂದ್ರ ಸರ್ಕಾರ ರಚಿಸಿರುವ ಡಾ.ರಮೇಶ್ ಚಾಂದ್ ನೇತೃತ್ವದ ಉನ್ನತ ಮಟ್ಟದ ಅಧಿಕಾರಿಗಳ ಜಂಟಿ ಸಮಿತಿ ಸಭೆ ಬೆಂಗಳೂರಿನಲ್ಲಿ ಗುರುವಾರ ನಡೆಯುತ್ತಿದೆ. ಈ ಬಗ್ಗೆ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಕಾರ್ಖಾನೆ ಆಡಳಿತ ಮಂಡಳಿ ಸಹ ಬದ್ಧವಾಗಿದೆ. ಅಲ್ಲಿಯವರೆಗೆ ಗೋದಾಮಿನ ಬೀಗ ತೆರವುಗೊಳಿಸುವುದಿಲ್ಲ. ಸಕ್ಕರೆ ದಾಸ್ತಾನು ಮಾರಾಟ ಮಾಡುವುದಿಲ್ಲ ಎಂದು ಸಹಾಯಕ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ರೈತರ ಮುಖಂಡರಿಗೆ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಅಂತ್ಯ ಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.