ಕನ್ನಡಪ್ರಭ ವಾರ್ತೆ ವಿಜಯಪುರ
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಬರಗಾಲದಿಂದ ತತ್ತರಿಸಿರುವ ಜಿಲ್ಲೆ ರೈತರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ, ಈಗ ವಿದ್ಯುತ್ ಕಣ್ಣಾಮುಚ್ಚಾಲೆ ಹಾಗೂ ಕಳಪೆಮಟ್ಟದ ವಿದ್ಯುತ್ ವಿತರಣೆಯಿಂದ ಅಡಚಣೆ ಉಂಟಾಗುತ್ತಿದೆ. ತೋಟದ ಮನೆಗಳಲ್ಲಿ ವಾಸಿಸುವ ರೈತರ ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬಂದಿರುವುದರಿಂದ ಅಭ್ಯಾಸ ಮಾಡುವುದಾದರು ಹೇಗೆ, ಹುಳ ಹುಪ್ಪಡಿ, ಕಾಡು ಪ್ರಾಣಿಗಳಿಂದ ಜೀವ ಭಯದಲ್ಲಿ ರೈತರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಂಪಸೆಟ್‌ಗೆ ಹಗಲು ೧೨ಗಂಟೆ ತ್ರೀ ಫೇಸ್ ಹಾಗೂ ರಾತ್ರಿಯಿಡಿ ಮೊದಲಿನಂತೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಈ ವೇಳೆ ಅವಶ್ಯಕತೆ ಇರುವ ರೈತರು ಕೃಷಿ ಪಂಪಸೆಟ್ ಪ್ರಾರಂಭಿಸುವಂತೆ ಅನುಕೂಲ ಮಾಡಿಕೊಡಬೇಕು. ರೈತರ ಐಪಿ ಸೆಟ್‌ಗೆ ಆಧಾರ್ ಜೋಡಣೆ, ಸ್ವಯಂ ವೆಚ್ಚ ಯೋಜನೆ ಜಾರಿ ಮಾಡುತ್ತಿರುವುದು ತೀರಾ ಖಂಡನೀಯ. ಒಬ್ಬ ಸಣ್ಣ ರೈತ ಐಪಿ ಸೆಟ್‌ಗಾಗಿ ೩-೪ ₹ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರದ ಇದರ ಹಿಂದಿನ ಉದ್ದೇಶವೇ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು ಕೂಡಲೇ ಕೈಬಿಡಬೇಕು. ಹೀಗಾಗಲು ರೈತರು ಬಿಡುವುದಿಲ್ಲ ಎಂದು ದೂರಿದರು.ಕೋಲಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ರೈತರೆಲ್ಲರು ಆರ್.ಆರ್ ನಂಬರ್ ಮಾಡಿಕೊಂಡು ಕೃಷಿ ಮಾಡುವ ಸ್ಥಿತಿಯಲ್ಲಿ ನಮ್ಮ ದೇಶದ ಯಾವ ರೈತರು ಸಿದ್ಧರಿಲ್ಲ. ಅದು ಸಾಧ್ಯವೂ ಇಲ್ಲಾ. ನೆರೆಯ ಕೆಲವೊಂದು ರಾಜ್ಯದಲ್ಲಿ ರೈತರಿಗೆ ೨೪ಗಂಟೆ ಉಚಿತ ವಿದ್ಯುತ್ ವಿತರಣೆ ಮಾಡುತ್ತಿರುವುದು ಗಮನಿಸಿ, ನಮ್ಮ ರಾಜ್ಯದಲ್ಲಿ ೨೪ಗಂಟೆ ಉಚಿತ ವಿದ್ಯುತ್ ನೀಡಬೇಕು. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಈ ಕುರಿತು ಸಿಎಂ ಹಾಗೂ ಸಚಿವರು ಚರ್ಚೆ ಮಾಡಿ ರೈತಪರ ನಿರ್ಣಯ ಕೈಗೊಳ್ಳಬೇಕು. ರೈತರಿಗೆ ಸರಿ ವಿದ್ಯುತ್ ಬರದಿದ್ದರೆ ರಾಜ್ಯ ವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಟಿಸಿ ಸುಟ್ಟರೆ ನಗರಗಳಲ್ಲಿ ೨೪ಗಂಟೆ ಹಾಗೂ ಗ್ರಾಮೀಣ ಭಾಗದಲ್ಲಿಯ ೭೨ಗಂಟೆಗಳಲ್ಲಿ ಬದಲಾವಣೆ ಮಾಡಿ ಕೊಡಲು ಇಲಾಖೆ ಕೆಲವೊಂದು ಅಧಿಕಾರಿಗಳ ಹಣದ ಬೇಡಿಕೆ ಇಡುತ್ತಿದ್ದು, ಇದು ನಿಲ್ಲಬೇಕು. ಗುತ್ತಿಗೆದಾರರು ಟಿಸಿಗಳನ್ನು ಸರಿಯಾಗಿ ತುಂಬದೇ ಕಳಪೆ ಮಟ್ಟದ ಸಾಮಗ್ರಿ ಬಳಸುತ್ತಿದ್ದು ಇದರಿಂದ ಟಿಸಿಗಳು ಪದೇ ಪದೇ ಸುಡುತ್ತಿವೆ. ಇದರ ಬಗ್ಗೆ ತನಿಖೆ ಆಗಬೇಕು ಹಾಗೂ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಬಬಲೇಶ್ವರ ಅಧ್ಯಕ್ಷ ಮಕಬುಲ ಕೀಜಿ, ಇಂಡಿ ಅಧ್ಯಕ್ಷ ಎಂ.ಎಚ್.ಪೂಜಾರಿ, ರಾಮಚಂದ್ರ ಪಾಟೀಲ, ರಾಮಚಂದ್ರ ಬಡಿಗೇರ, ಸಂಗಪ್ಪ ಟಕ್ಕೆ, ಬಸವರಾಜ ನ್ಯಾಮಗೊಂಡ, ಸಂಪತ್ತ ಜಮಾದಾರ, ಶಾನೂರ ನಂದರಗಿ, ನಜೀರ ನಂದರಗಿ, ಚನ್ನು ಜಮಖಂಡಿ, ಬಸವರಾಜ ಮಸೂತಿ, ಕಲ್ಲಪ್ಪ ಪಾರಶೆಟ್ಟಿ, ಮಹಾಂತೇಶ ಮಮದಾಪುರ, ಮಲ್ಲಿಕಾರ್ಜುನ ಘೋಡೆಕಾರ ಸೇರಿದಂತೆ ಮುಂತಾದವರು ಇದ್ದರು.