ಲಕ್ಷ್ಮೇಶ್ವರ: ಪಟ್ಟಣದ ದೊಡ್ಡೂರ ರಸ್ತೆಗೆ ಹೊಂದಿಕೊಂಡಿರುವ ರೈತ ಸಂಪರ್ಕ ರಸ್ತೆಗಳೆಲ್ಲಿ ಕೆಸರು ತುಂಬಿಕೊಂಡು, ಗುಂಡಿಗಳು ಬಿದ್ದು ರೈತರು ತಮ್ಮ ಹೊಲಗಳಿಗೆ ಎತ್ತು, ಚಕ್ಕಡಿ ತೆಗೆದುಕೊಂಡು ಹೋಗಲು ಪರದಾಡುವಂತಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತರಾದ ಬಸವರಾಜ ಬೆಂಡಿಗೇರಿ ಮಾತನಾಡಿ, ದೊಡ್ಡೂರ ರಸ್ತೆಗೆ ಹೊಂದಿಕೊಂಡಿರುವ ಜಂಗಳಕೇರಿ ರಸ್ತೆಯು ಪಟ್ಟಣದ ಸಾವಿರಾರು ರೈತರು ತಮ್ಮ ಹೊಲಗಳಿಗೆ ಹೋಗಲು ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಜಿಟಿ ಜಿಟಿ ಮಳೆಯಿಂದ ಗುಂಡಿಗಳು ಬಿದ್ದು ರಸ್ತೆಯು ಕೆಸರುಮಯವಾಗಿದೆ. ಪ್ರತಿನಿತ್ಯ ರೈತರು ತಮ್ಮ ಹೊಲಗಳಿಗೆ ಹೋಗಲು ಪರದಾಡುವಂತಾಗಿದೆ. ರೈತರು ಹೊಲಗಳಿಗೆ ಎತ್ತು ಚಕ್ಕಡಿ ತೆಗೆದುಕೊಂಡು ಹೋಗಲು ಆಗದೆ ಹೊಲದಲ್ಲಿ ಕಳೆ ಕೀಳಲು, ಹೊಲದಲ್ಲಿನ ಫಸಲು ತೆಗೆದುಕೊಂಡು ಬರಲು ಆಗದೆ ರೈತರು ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ. ಕೆಸರುಮಯವಾಗಿರುವ ರಸ್ತೆಯಲ್ಲಿ ಬೈಕ್, ಟಂಟಂ, ಟ್ರ್ಯಾಕ್ಟರ್‌ಗಳು ಮುಗುಚಿ ಬೀಳುವ ಸಂಭವವಿದೆ, ಸರ್ಕಾರ ಮತ್ತು ಜನ ಪ್ರತಿನಿಧಿಗಳು ಈ ರಸ್ತೆಯನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಮಲ್ಲಪ್ಪ ಉಮಚಗಿ ಹಾಗೂ ರೈತ ಸಂಘಟನೆಯ ಮುಖಂಡ ಟಾಕಪ್ಪ ಸಾತಪೂತೆ, ರೈತರು ಹೊಲಕ್ಕೆ ಹೋಗುವ ರಸ್ತೆಯು ಜಿಟಿ ಜಿಟಿ ಮಳೆಯಿಂದ ರಸ್ತೆಗಳೆಲ್ಲ ಹೊಂಡಗಳಾಗಿವೆ, ಇದರಿಂದ ರೈತರು ಹೊಲಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ ಶೀಘ್ರದಲ್ಲಿ ರೈತ ಸಂಪರ್ಕ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತರು ತಾತ್ಪೂರ್ತಿಕ ರಸ್ತೆ ನಿರ್ಮಾಣಕ್ಕೆ ಬೇಕಾದ ಕಡಿ ಹಾಗೂ ಮಣ್ಣನ್ನು ನಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಂಡು ಸಾಗಾಟ ಮಾಡೋಣ, ನಂತರ ಸರ್ಕಾರ ಮತ್ತು ಜನಪ್ರನಿಧಿಗಳು ಮಳೆಗಾಲ ಕಡಿಮೆಯಾದ ಮೇಲೆ ದುರಸ್ತಿ ಮಾಡಿಸಲು ಒತ್ತಡ ಹೇರುವ ಕಾರ್ಯ ಮಾಡೋಣ ಎಂದು ಮಾತನಾಡಿದರು.ಈ ವೇಳೆ ರಾಮಣ್ಣ ಗೌರಿ, ರಿಯಾಜ್‌ಅಹ್ಮದ್ ಗದಗ, ಫಕ್ಕೀರಪ್ಪ ಹಾವನೂರ, ಈಶ್ವರಪ್ಪ ಉಮಚಗಿ, ಹೊಳಲಪ್ಪ ಹಾವನೂರ, ಮಹ್ಮದ್‌ಸಾಬ ಸಿದ್ದಿ, ಹುಸೇನಸಾಬ್ ಸಿದ್ದಿ, ಸರ್ಪರಾಜ್ ಬಂಕಾಪೂರ, ಬಸವರಾಜ ಉಮಚಗಿ, ಸಲೀಮ್‌ಸಾಬ ಸೂರಣಗಿ, ಬಸವರಾಜ ಉಮಚಗಿ ಸೇರಿದಂತೆ ಅನೇಕರು ಇದ್ದರು.