ಕನ್ನಡಪ್ರಭ ವಾರ್ತೆ ಮಂಡ್ಯ
ಈ ಸರ್ಕಾರಕ್ಕೆ ಕಾರ್ಖಾನೆಯನ್ನು ಸಮರ್ಥವಾಗಿ ನಡೆಸುವ ತಾಕತ್ತಿಲ್ಲ. ಅಧಿಕಾರದಲ್ಲಿರುವವರಿಗೆ ಸಕಾಲಕ್ಕೆ ಕಾರ್ಖಾನೆಯನ್ನು ಆರಂಭಿಸಿ ಕ್ರಮಬದ್ಧವಾಗಿ ಕಬ್ಬು ಅರೆಯುವ ಯೋಗ್ಯತೆ ಇಲ್ಲ. ಕಬ್ಬು ಬೆಳೆಗಾರರಿಗೆ ತೊಂದರೆ ನೀಡುತ್ತಿರುವ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿದರೆ ಅವರಾದರೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದಷ್ಟು ಬೇಗ ರಾಜ್ಯಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರ ಮಾಡಲಿ ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಪತ್ರ ಸಮರ್ಪಿಸಿದರು.
ಕಾರ್ಖಾನೆಗೆ ದಶಕಗಳಿಂದ ಗ್ರಹಣ ಹಿಡಿದಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಪ್ರತಿ ವರ್ಷ ಸಾರ್ವಜನಿಕರ ಹಣ ಬಿಡುಗಡೆಯಾಗುತ್ತಿದೆ. ಸುಖಾಸುಮ್ಮನೆ ಜನರ ತೆರಿಗೆ ಹಣ ವ್ಯಯವಾಗುತ್ತಿದೆ. ಕಬ್ಬು ಬೆಳೆದ ರೈತನಿಗೆ ಬೆಲೆಯಿಲ್ಲದಂತಾಗಿ ಈ ಪ್ರದೇಶದ ಕಬ್ಬು ಬೆಳೆಗಾರರಾದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾತನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಎಸ್.ರವಿ ದೂರಿದರು.ಕಬ್ಬು ಬೆಳೆಗಾರರಾದ ನಮ್ಮದು ಕಬ್ಬು ತರುವುದಷ್ಟೇ ಕೆಲಸ. ಅರೆಯುವುದು ಕಾರ್ಖಾನೆ ಆಡಳಿತ ಮಂಡಳಿಯವರ ಕರ್ತವ್ಯ. ಬಾಯ್ಲಿಂಗ್ ಹೌಸ್ ಸರಿಯಾಗಿಲ್ಲ, ಚೈನ್ ಕ್ಯಾರಿಯರ್ ರಿಪೇರಿಯಾಗಬೇಕು ಎಂಬ ತಾಂತ್ರಿಕ ಕಾರಣಗಳು ಬೆಳೆಗಾರರಿಗೆ ಏಕೆ ಬೇಕು. ನಿಮ್ಮಿಂದ ಕಾರ್ಖಾನೆ ಮುನ್ನಡೆಸಲಾಗದಿದ್ದರೆ ಖಾಸಗಿಯವರಿಗೆ ವಹಿಸಿಬಿಡಿ. ಅವರಾದರೂ ಸಕಾಲಕ್ಕೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗೆ ಹಣ ಕೊಡುತ್ತಾರೆ ಎಂದು ಒತ್ತಾಯಿಸಿದರು.
ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ಕ್ರಮಬದ್ಧವಾಗಿ ಕಬ್ಬನ್ನು ಅರೆದು ೨೪ ಗಂಟೆಯೊಳಗೆ ರೈತರ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಮೈಷುಗರ್ ಕಾರ್ಖಾನೆಗೆ ಕಬ್ಬು ಪೂರೈಸಿ ತಿಂಗಳಾದರೂ ಈವರೆಗೆ ಯಾವೊಬ್ಬ ರೈತರ ಖಾತೆಗೆ ಹಣ ಬಂದಿಲ್ಲ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರ ಮಹೇಶ್ ಕೊತ್ತತ್ತಿ ಮಾತನಾಡಿ, ನಾಲ್ಕೈದು ವರ್ಷಗಳ ಹಿಂದೆ ಇದೇ ರೀತಿ ಸಹಕಾರಿ- ಸರ್ಕಾರಿ ವ್ಯವಸ್ಥೆಯಿಂದ ಪಕ್ಕದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದಾಗ ನಿರಾಣಿ ಷುಗರ್ಸ್ ಕಂಪನಿಯವರು ವಹಿಸಿಕೊಂಡು ಒಂದೇ ವರ್ಷದಲ್ಲಿ ಕಾರ್ಖಾನೆಯ ವ್ಯವಸ್ಥೆಗಳನ್ನೆಲ್ಲಾ ಸರಿಪಡಿಸಿ, ರೈತರ ಕಬ್ಬು ಸಕಾಲದಲ್ಲಿ ಕಟಾವಾಗಿ ಸರಿಯಾದ ಸಮಯದಲ್ಲಿ ಕಬ್ಬು ಅರೆದು ಹಣ ಪಾವತಿಸುತ್ತಿರುವ ಜೀವಂತ ಉದಾಹರಣೆ ನಮ್ಮ ಕಣ್ಣೆದುರಿನಲ್ಲಿದೆ. ಮೈಷುಗರ್‌ಗಿಂತಲೂ ಕೆಟ್ಟ ಸ್ಥಿತಿಯಲ್ಲಿದ್ದ ಪಿಎಸ್‌ಎಸ್‌ಕೆಗೆ ಮೂರೇ ತಿಂಗಳಲ್ಲಿ ಮರುಜೀವ ನೀಡಿ ರೈತರಿಗೆ ಉಪಕಾರಿಯಾಗುವಂತೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಮೈಷುಗರ್‌ಗೆ ಎಷ್ಟೇ ಹಣ ಕೊಟ್ಟರೂ ಅದು ಕಳ್ಳರ ಪಾಲಾಗುತ್ತಿದೆಯೇ ಹೊರತು ಕಾರ್ಖಾನೆ ಪ್ರಗತಿಗೆ ಬಳಕೆಯಾಗುತ್ತಿಲ್ಲ ಎಂದು ಜರಿದರು.
ಪ್ರತಿಭಟನೆಯಲ್ಲಿ ಶ್ರೀಕಾಂತ್, ಗಿರೀಶ್, ವಿಕಾಸ್, ಪವನ್, ಮಹದೇವಯ್ಯ, ದ್ಯಾವಣ್ಣ, ಕುಮಾರ್, ಬಿ.ಕೆ.ಸತೀಶ, ನಂಜುಂಡಯ್ಯ ಸೇರಿದಂತೆ ಇತರರಿದ್ದರು.