ನರಗುಂದ: ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿಸಬೇಕೆಂದು ರೈತರು ಕೈಗಾರಿಕಾ ಸಚಿವ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರಿಗೆ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ತಾಲೂಕು ರೈಲ್ವೆ ಹೋರಾಟ ಸಮಿತಿ ಆಶ್ರಯದಲ್ಲಿ ಮನವಿ ನೀಡಿ ನಂತರ ವಿವಿಧ ರೈತರು ಮಾತನಾಡಿ, 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನಜೋಳ, ಸೂರ್ಯಕಾಂತಿ, ಬಿಟಿ ಹತ್ತಿ, ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿವೆ ಎಂದರು.ಅತಿಯಾದ ಮಳೆಯಿಂದ ತಾಲೂಕಿನ ಶೇ. 80ರಷ್ಟು ಹೆಸರು ಬೆಳೆಹಾನಿಯಾಗಿವೆ. ಉಳಿದ ಅಲ್ಪಸ್ವಲ್ಪ ಬೆಳೆಯನ್ನು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಯೋಗ್ಯ ಬೆಲೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೇಗ ಹೆಸರು ಖರೀದಿ ತೆರೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ, ಪ್ರವೀಣ ಯಾವಗಲ್, ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ, ಆರ್.ಎನ್. ಪಾಟೀಲ, ವೀರಣ್ಣ ಸೊಪ್ಪಿನ ಇತರರು ಇದ್ದರು. ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತಡಂಬಳ: ಗ್ರಾಮ ಸೇರಿದಂತೆ ಹೋಬಳಿಯ 24 ಗ್ರಾಮಗಳಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿರಂತರ ಮಳೆಯಿಂದಾಗಿ ಜನರು ಮನೆಗಳಿಂದ ಹೊರಗಡೆ ಬರಲಿಲ್ಲ. ಅಲ್ಲದೆ ಜಮೀನುಗಳಿಗೆ ರೈತರು ಜಮೀನುಗಳಿಗೆ ತೆರಳದೆ ಮನೆಯಲ್ಲಿಯೆ ಕಳೆಯುವಂತಾಯಿತು.4 ದಿನಗಳಿಂದ ಆರಂಭಗೊಂಡ ಮಳೆಯಿಂದಾಗಿ ಮಣ್ಣಿನ ಮನೆಗಳು ಸೋರಲಾರಂಭಿಸಿವೆ. ಹಗಲು- ರಾತ್ರಿ ಎನ್ನದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಸಾಮಾನ್ಯರ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಳೆಯಿಂದಾಗಿ ಇಳುವರಿಗೆ ಹೊಡೆತ ಬೀಳುತ್ತಿದೆ. ಇತ್ತೀಚೆಗೆ ಉಳ್ಳಾಗಡ್ಡಿಗೆ ದರ ಕುಸಿದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆರೆದು ರೈತರ ಉತ್ಪನ್ನ ಖರೀದಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಡಂಬಳದ ರೈತ ಸಿದ್ದಪ್ಪ ಹೊಂಬಳ.