ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಅನಂತರಾಮ್ ವೃತ್ತದಲ್ಲಿ ಸೇರಿದ ರೈತರು ರಾಜ್ಯ ಸರ್ಕಾರ, ಜಲ ಸಂಪನ್ಮೂಲ ಸಚಿವ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಳೆ ಇಲ್ಲದೇ ಒಣಗುತ್ತಿರುವ ಬೆಳೆಗಳಿಗೆ ನೀರು ಒದಗಿಸಿ ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತ ಬವಣೆ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಕಳೆದ ಒಂದು ವಾರದ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವುದಾಗಿ ತೀರ್ಮಾನ ಮಾಡಿದ್ದರು. ಆದರೆ, ಸಭೆ ತೀರ್ಮಾನದಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂದರು.
ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ಇಡೀ ದೇಶ ನಾಶವಾಗುತ್ತದೆ. ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ನಾಲೆಗಳಿಗೆ ನೀರು ಹರಿಸದೆ ಈ ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ನಾಲೆಗಳಿಗೆ ನೀರು ಹರಿಸದಿದ್ದರೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಎಇ ಕುಮಾಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರೋಡೆ ಕೆರೆ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಚನ್ನಕೇಶವ, ಗೃಹನಿರ್ಮಾಣ ಮಂಡಳಿ ನಿರ್ದೇಶಕ ಭಾಸ್ಕರ್, ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಶಂಕರ್, ನಾಗೇಶ್, ಬೆಟ್ಟೇಗೌಡ ಸೇರಿದಂತೆ ಹಲವರು ಇದ್ದರು.