ದಾಬಸ್‍ಪೇಟೆ: ದಕ್ಷಿಣಕಾಶಿ ಶಿವಗಂಗೆ ಸುತ್ತಮುತ್ತ ಕೈಗಾರಿಕೆಗಳ ಸ್ಥಾಪನೆಗೆ ರೈತರ ಫಲವತ್ತಾದ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು, ಯಾವುದೇ ಕಾರಣಕ್ಕೂ ನಾವು ಜಮೀನನ್ನು ಕೊಡುವುದಿಲ್ಲ, ಜಮೀನನ್ನು ಪಡೆಯುವುದಾದರೆ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ರೈತರು ಕೆಐಎಡಿಬಿ ಅಧಿಕಾರಿಗಳನ್ನು ಆಗ್ರಹಿಸಿದ್ದಲ್ಲದೆ ಹಲವು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.
ಸೋಂಪುರ ಹೋಬಳಿಯ ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀ ಸ್ವರ್ಣಾಂಬ ಪ್ರಾರ್ಥನಾ ಮಂದಿರದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಏರ್ಪಡಿಸಿದ್ದ ಮಾಚನಹಳ್ಳಿ, ಘಂಟೆಹೊಸಹಳ್ಳಿ, ಕಂಬಾಳು, ಕಾಸರಘಟ್ಟ ಗ್ರಾಮಗಳ 486-27.08 ಎಕರೆ ಜಮೀನಿನ ಭೂ ದರ ನಿಗದಿ ಸಭೆಯಲ್ಲಿ ರೈತರು ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಭೂಸ್ವಾಧೀನದಿಂದ ಜಮೀನನ್ನು ಕೈಬಿಡಿ:
ಕುಮುದ್ವತಿ ಜಲಾನಯನ ಪ್ರದೇಶ ಹಾಗೂ ಪುರಾಣ ಪ್ರಸಿದ್ಧಿಯಾಗಿರುವ ಶಿವಗಂಗೆ ಬೆಟ್ಟಯಿದ್ದು, ಸುತ್ತಮುತ್ತಲಿನ ಪ್ರದೇಶದ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಟ್ಟು, ಬರಡು ಭೂಮಿಗಳನ್ನು ಭೂಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳನ್ನು ನಿರ್ಮಿಸಿಕೊಳ್ಳಿ ಅದನ್ನು ಬಿಟ್ಟು ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಬಾರದೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಎಕರೆಗೆ 2.50 ಕೋಟಿಗೆ ಆಗ್ರಹ:
ಸೋಂಪುರ ಹೋಬಳಿಯಲ್ಲಿ ಒಂದು ಸೈಟಿನ ಬೆಲೆ ಕನಿಷ್ಟ 50 ಲಕ್ಷದಿಂದ 65 ಲಕ್ಷದವರೆಗೆ ಇದೆ.ಕಳೆದ ವರ್ಷ ಎಕರೆಗೆ 1.30ಕೋಟಿ ನಿಗದಿಪಡಿಸಿದ್ದೀರಾ? ಈ ಬಾರಿ ದುಪ್ಪಟ್ಟು ಪರಿಹಾರ ನೀಡಿದರೆ ಮಾತ್ರ ನಮ್ಮ ಜಮೀನಗಳನ್ನು ನೀಡುತ್ತೇವೆ. ನೀವು ಕೊಡುವ ಪರಿಹಾರಕ್ಕೆ ಮೂರು ಸೈಟ್ ಬರಲ್ಲ ಹಾಗಾಗಿ ನಮ್ಮ ಜಮೀನಿಗೆ 2.50 ಕೋಟಿಯನ್ನು ಪ್ರತಿ ಎಕರೆಗೆ ನೀಡಬೇಕು ಎಂದು ಆಗ್ರಹಿಸಿದರು.ಸ್ಮಶಾನಕ್ಕೆ ಆಗ್ರಹ:
ರೈತ ಗೆದ್ದಲಹಳ್ಳಿ ಚಿದಾನಂದ್ ಮಾತನಾಡಿ, ಸೋಂಪುರ ಹೋಬಳಿಯಲ್ಲಿ ಸಾವಿರಾರು ಎಕರೆ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಐದು ಹಂತಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದು, ಆದರೆ ಎಲ್ಲಿಯೂ ಸ್ಮಶಾನಕ್ಕೆ ಜಾಗ ಮೀಸಲಿಟ್ಟಿಲ್ಲ. ಪ್ರತಿ ಗ್ರಾಮಕ್ಕೂ ಈ ಬಾರಿ ಕನಿಷ್ಟ ಎರಡರಿಂದ ಮೂರು ಎಕರೆ ಜಮೀನುಗಳನ್ನು ಸ್ಮಶಾನಕ್ಕೆ ಮೀಸಲಿಡಬೇಕು. ಗ್ರಾಮಾಠಾಣಾದಿಂದ ಮುನ್ನೂರು ಮೀಟರ್ ಜಮೀನು ಬಿಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.ಶೀಘ್ರವೇ ಭೂಪರಿಹಾರ ನೀಡಬೇಕು:
ಭೂಸ್ವಾಧೀನವಾದ ರೈತರಿಗೆ ಕನಿಷ್ಠ ಎರಡು ತಿಂಗಳೊಳಗೆ ಭೂಪರಿಹಾರ ನೀಡಬೇಕು. ಹಾಗೂ ತಮ್ಮ ಜಮೀನುಗಳಿಗೆ ಭೂಪರಿಹಾರ ಪಡೆಯಲು ಬರುವ ರೈತರ ಬಳಿ ಅಧಿಕಾರಿಗಳು, ದಲ್ಲಾಳಿಗಳು ಯಾವುದೇ ಕಮಿಷನ್ ಪಡೆಯಬಾರದು, ಕಮಿಷನ್ ಹಾವಳಿ ತಪ್ಪಿಸಬೇಕೆಂದು ಕಂಬಾಳು ಗ್ರಾಮದ ಗಾರೆಮನೆ ಮೂರ್ತಪ್ಪ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದರು.ಪರಿಹಾರದ ಬದಲು ಜಮೀನು:
ಕೆಐಎಡಿಬಿ ವಿಶೇಷ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮಾತನಾಡಿ, ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ರೈತರಿಗೆ ಭೂಪರಿಹಾರ ನೀಡುತ್ತದೆ. ಅಲ್ಲದೆ ರೈತರು ನಮಗೆ ಹಣ ಬೇಡವೆಂದರೆ ಪ್ರತಿ ಎಕರೆಗೆ ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಿದ 10781 ಅಡಿ ಜಾಗವನ್ನು ರೈತರಿಗೆ ನೀಡಲಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.ರೈತರ ಮನವಿ ಸರ್ಕಾರದ ಗಮನಕ್ಕೆ:
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಮಾತನಾಡಿ, ಈ ಹಿಂದೆಯೂ ಸಹ ಅಕ್ಕಪಕ್ಕದ ಗ್ರಾಮಗಳ ಜಮೀನನ್ನು ಭೂಸ್ವಾಧೀನಪಡಿಸಿಕೊಂಡಿದ್ದು, ಮುಂದುವರೆದ ಭಾಗವಾಗಿ ಮೂರು ಹಳ್ಳಿಗಳ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು, ರೈತರ ಆಗ್ರಹ, ಮನವಿಗಳನ್ನು ಸರ್ಕಾರದ ಮುಂದಿಟ್ಟು ಹೆಚ್ಚು ಪರಿಹಾರ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೆದ್ದಲಹಳ್ಳಿ ಸಿದ್ದಲಿಂಗಯ್ಯ, ನಿವೃತ್ತ ಶಿಕ್ಷಕ ರಂಗಸ್ವಾಮಿ, ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್, ರೈತರಾದ ಮಹದೇವ್, ವೆಂಕಟೇಶ್, ಮಂಜುನಾಥ್, ಪುನೀತ್ ಮತ್ತಿತರರಿದ್ದರು.
ಕೋಟ್......ಭೂಮಿಯ ಸರ್ಕಾರಿ ಮೌಲ್ಯದ ಪ್ರಕಾರ ಒಂದು ಕೋಟಿ ರು.ಗಳಿದ್ದು, ರೈತರಿಗೆ ಅನುಕೂಲವಾಗಲೆಂದು 1.60 ಕೋಟಿ ರು.ಗಳನ್ನು ದರ ನಿಗದಿ ಮಾಡಲಾಗಿದೆ. ಕಾನೂನು ಬದ್ದವಾಗಿ ರೈತರ ಜಮೀನುಗಳಿಗೆ ದರ ನಿಗದಿಪಡಿಸಲಾಗಿದೆ. ರೈತರ ಅನ್ಯಾಯವಾಗುವುದಿಲ್ಲ. ನವೆಂಬರ್ ತಿಂಗಳ ನಂತರ ಭೂಪರಿಹಾರ ನೀಡಲಾಗುತ್ತದೆ. ಸರಿಯಾದ ದಾಖಲೆ ನೀಡಿ ಭೂಪರಿಹಾರದ ಹಣ ಪಡೆದುಕೊಳ್ಳಬಹುದು.
-ರಘುನಂದನ್, ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿಬಾಕ್ಸ್..........
ರೈತರ ಬೇಡಿಕೆಗಳು1. ಪ್ರತಿ ಎಕರೆಗೆ 2.50 ಕೋಟಿ ಭೂಪರಿಹಾರ ನೀಡಬೇಕು
2. ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡಬೇಕು3.ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಮಾತ್ರ ಸ್ಥಾಪನೆಗೆ ಅವಕಾಶ
4 ಕಮಿಷನ್ ಹಾವಳಿ ತಪ್ಪಿಸಿ ನೇರ ರೈತರಿಗೆ ಭೂಪರಿಹಾರ ನೀಡಬೇಕು5. ಸ್ಮಶಾನ, ಸರ್ಕಾರಿ ಶಾಲೆ, ಕ್ರೀಡಾಂಗಣಗೆ ಭೂಮಿ ಮೀಸಲಿಡಬೇಕು.
ಪೋಟೋ 1 :ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀ ಸ್ವರ್ಣಾಂಬ ಪ್ರಾರ್ಥನಾ ಮಂದಿರದಲ್ಲಿ ಕೆಐಎಡಿಬಿ ಏರ್ಪಡಿಸಿದ್ದ ಭೂ ದರ ನಿಗದಿ ಸಭೆಯಲ್ಲಿ ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಮಾತನಾಡಿದರು.