ಹಾವೇರಿ: ನಿರಂತರ ಮಳೆಯಿಂದಾಗಿ ಬೆಳೆಗಳು ಕೊಳೆಯುವ ಆತಂಕಕ್ಕೆ ಒಳಗಾಗಿರುವ ರೈತರು ಯೂರಿಯಾ ಗೊಬ್ಬರ ಪೂರೈಕೆ ಮಾಡುವಂತೆ ಆಗ್ರಹಿಸಿ ಶನಿವಾರ ತಾಲೂಕಿನ ಕನವಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಚೇರಿ ಎದುರು ಗಲಾಟೆ ನಡೆಸಿದ್ದಾರೆ.
ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕ್ಷೀಣಿಸುತ್ತಿವೆ. ಅವುಗಳಿಗೆ ಮೇಲುಗೊಬ್ಬರ ಹಾಕಲಿಕ್ಕೆ ಯೂರಿಯಾ ರಸಗೊಬ್ಬರದ ಅಗತ್ಯತೆ ಇದ್ದು, ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ದಾಸ್ತಾನು ಬರುವ ನಿರೀಕ್ಷೆ: ಕನವಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಯೂರಿಯಾ ಗೊಬ್ಬರದ ಅಭಾವ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರೊಂದಿಗೆ ಚರ್ಚೆ ಮಾಡಿದ ಬಳಿಕ ಅಧಿಕಾರಿಗಳು ಸೋಮವಾರ ರಸಗೊಬ್ಬರ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸೊಸೈಟಿ ಸದಸ್ಯರೂ ಆದ ಗ್ರಾಪಂ ಸದಸ್ಯ ಪರಮೇಶಪ್ಪ ದೊಡ್ಡಜಾಲಿ ತಿಳಿಸಿದ್ದಾರೆ.